ಶಿವಮೊಗ್ಗ, ಮಾರ್ಚ್ 27, : ನಮ್ಮ ನಡುವೆ ಇರುವ ಕಲೆಗಳಲ್ಲಿ ರಂಗಭೂಮಿ ಅತೀ ಹೆಚ್ಚು ಜೀವಂತಿಕೆ ಇರುವ ಕಲೆಯಾಗಿದ್ದು, ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ ಎಂದು ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ ಹೇಳಿದರು.
ಅವರು ಇಂದು ಶಿವಮೊಗ್ಗ ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವಾರು ಕಲೆಗಳು ಸಮೂಹದಿಂದ ರೂಪುಗೊಳ್ಳುವ ರಂಗಕಲೆ ವ್ಯಕ್ತಿಯನ್ನು
ಸೃಜನಶೀಲನನ್ನಾಗಿಸುತ್ತದೆ. ರಂಗದ ಮೇಲೆ ಒಂದು ಎರಡು ಪಾತ್ರಗಳು ಇದ್ದರೂ ಕೂಡ ಅವುಗಳ ಹಿಂದೆ ಪ್ರಸಾದನ, ಬೆಳಕು, ಸಂಗೀತ, ರಂಗಸಜ್ಜಿಕೆ ಇನ್ನಿತರ ಪಾತ್ರಗಳೂ ಕೂಡ ತಮ್ಮದೇ ಅದ ಕೆಲಸ ಮಾಡುತ್ತಿರುತ್ತವೆ ಎಂದು ಅವರು ವಿಶ್ಲೇಷಿಸಿದರು.
ಈ ವರ್ಷದ ವಿಶ್ವರಂಗಭೂಮಿ ಸಂದೇಶವನ್ನು ರಂಗಸಮಾಜದ ಮಾಜಿ ಸದಸ್ಯ, ರಂಗಕರ್ಮಿ ಆರ್.ಎಸ್. ಹಾಲಸ್ವಾಮಿ ವಾಚನ ಮಾಡಿದರು. ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ದ್ರುವಗಳಲ್ಲಿ ಇರುವಂತೆ, ಯುದ್ಧ ಹಾಗೂ ಕಲೆ ಕೂಡ ವಿರುದ್ಧ ಮುಖಗಳು.
ಯಾರು ಕಲೆಯ ಮೂಲಕ ಕಾಯಕ ಮಾಡುತ್ತಾರೋ ಅವರು ಶಾಂತಿಯ ಸಾರ್ವತ್ರಿಕ ಪ್ರತಿಪಾದಕರಾಗಿ ನಿಲ್ಲುತ್ತಾರೆ ಎಂದು ಹಾಲಸ್ವಾಮಿ ತಿಳಿಸಿದರು.
ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಅವರು ಅಧ್ಯಕ್ಷತೆ ವಹಿಸಿದ್ದರು. ಆಂಗಿಕಾ ಅಭಿಯನ ಕುರಿತು ನೃತ್ಯಗುರು ಸಹನ ಚೇತನ್, ವಾಚಿಕ ಕುರಿತು ರಂಗಕರ್ಮಿ ಚೇತನ್ ಕುಮಾರ್ ಸಿ ರಾಯನಹಳ್ಳಿ, ಆಹಾರ್ಯ ಕುರಿತು ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ, ಸಾತ್ವಕ ಕುರಿತು ಶ್ರೀಹರ್ಷ ಗೋಭಟ್ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ಸದಭಿರುಚಿ ತಂಡದವರು ಆನು ಒಲಿದಂತೆ ಹಾಡುವೆ ನಾಟಕ ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗಚಿಂತನ ವಿಚಾರಗೋಷ್ಠಿಯನ್ನು ಹಿರಿಯ ರಂಗಕರ್ಮಿ, ಪ್ರಸಾದನ ತಜ್ಞ ಪುರುಷೋತ್ತಮ ತಲವಾಟ ಅವರು ಮೇಕಪ್ ಮಾಡುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು. ರಂಗಾಯಣ ಆಡಳಿತಾಧಿಕಾರಿ ಡಾ. ಶೈಲಜಾ, ರಂಗಸಮಾಜದ ಮಾಜಿ ಸದಸ್ಯ ಹಾಲಸ್ವಾಮಿ ಆರ್.ಎಸ್. ಸಹನಾ ಚೇತನ್, ಚೇತನ್ ರಾಯನಹಳ್ಳಿ, ಶ್ರಿಹರ್ಷ ಇನ್ನಿತರರು ಉಪಸ್ಥಿತರಿದ್ದರು