ಶಿವಮೊಗ್ಗ, ಮಾ.27:
ಶಿವಮೊಗ್ಗ ತಾಲ್ಲೂಕು ಕೋಟಿಗಂಗೂರು ಗ್ರಾಮ ಪಂಚಾಯತಿ ಅಧ್ಯಕ್ಷ, ದೇವಕಾತಿಕೊಪ್ಪ (ಜಕಾತಿಕೊಪ್ಪ) ದ ಮುಖಂಡರು, ಶಿವಮೊಗ್ಗ ಗ್ರಾಮಾಂತರ ವೀರಶೈವ ಸಮಾಜದ ಅಧ್ಯಕ್ಷರೂ ಆದ ಡಾ. ಡಿ.ಬಿ. ವಿಜಯ ಕುಮಾರ್ ನಿನ್ನೆ (ಮಾ. 26) ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಸರಳ ಸಜ್ಜನಿಕೆ ಹಾಗೂ ಎಲ್ಲರ ಜೀವನಾಡಿಯಾಗಿ ಸ್ಪಂದಿಸುತ್ತಿದ್ದ ವಿಜಯಕುಮಾರ್ (ಎಲ್ಲರ ಅಚ್ಚುಮೆಚ್ಚಿನ ವಿಜಯಣ್ಣ) ಅವರು ಪ್ರಸಕ್ತ ಕೋಟೆಗಂಗೂರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಇತ್ತೀಚೆಗಷ್ಟೆ ಗ್ರಾಪಂ ನ ನೂತನ ಕಟ್ಟಡದ ಕಾಮಗಾರಿ ಮುಗಿಸಿ ಉದ್ಘಾಟಿಸಿದ್ದರು.
ಜಾತಿ, ಮತ ಬೇಧವಿಲ್ಲದೇ, ಎಲ್ಲರೊಳಗೊಂದಾಗಿ ಇರುತ್ತಿದ್ದ ಅವರು ಎಂದೆಂದೂ ಲವಲವಿಕೆಯಿಂದ ಇರುತ್ತಿದ್ದರು. ಅವರು ತುಂಗಾತರಂಗ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿದ್ದರು.
ವಿಜಯಣ್ಣ ಅವರು ಪತ್ನಿ ಶೋಭಾ, ಇಬ್ಬರು ಪುತ್ರಿಯರು, ಸಹೋದರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಮಾ.27 ರ ಇಂದು ಮದ್ಯಾಹ್ನ 2 ಗಂಟೆಗೆ ಹಿಂದೂರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ:
ವಿಜಯಣ್ಣ ಅವರ ನಿಧನಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಉದ್ಯಮಿ, ಕಾಂಗ್ರೆಸ್ ಮುಖಂಡ ಸತ್ಯನಾರಾಯಣ್, ಸಂಸದ ಬಿ ವೈ ರಾಘವೇಂದ್ರ, ಮಾಜಿ ಶಾಸಕ ಕುಮಾರಸ್ವಾಮಿ,ವೈಹೆಚ್ ನಾಗರಾಜ್, ಷಣ್ಮುಖಪ್ಪ, ಸಿದ್ಲಿಪುರ ಕೇಶ್ವರಪ್ಪ ದೇವಕಾತಿಕೊಪ್ಪ ಗ್ರಾಮಸ್ಥರು, ಗ್ರಾಪಂ ಬಳಗ, ವೀರಶೈವ ಸಮಾಜ, ತುಂಗಾತರಂಗ ಪತ್ರಿಕಾ ಬಳಗ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸಿದ್ದಾರೆ.