ಶಿವಮೊಗ್ಗ,ಮಾ.೨೫: ಹವ್ಯಾಸಿ ರಂಗತಂಡಗಳ ಸಂಘ (ಒಕ್ಕೂಟ)ವತಿಯಿಂದ ಕುವೆಂಪು ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಮಾ.೨೬ರಿಂದ ೨೮ವರೆಗೆ ಶಿವಮೊಗ್ಗ ರಂಗ ಹಬ್ಬ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.೨೭ ರಂಗಭೂಮಿ ದಿನವಾಗಿದ್ದು, ಒಕ್ಕೂಟ ಕಲಾವಿದರ ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವು ಕಳೆದ ೨ ದಶಕಗಳಿಂದ ರಂಗಚಟುವಟಿಕೆಗಳನ್ನು ಮಾಡುತ್ತ ಬಂದಿದ್ದು, ಈ ವರ್ಷವೂ ಕೂಡ ೩ ದಿನಗಳ ಕಾಲ ನಾಟಕೋತ್ಸವವನ್ನು ಆಯೋಜಿಸಿದೆ ಎಂದರು.
ಮಾ.೨೬ರಂದು ಸಂಜೆ ೬.೪೫ಕ್ಕೆ ಸಹ್ಯಾದ್ರಿ ಕಲಾತಂಡದಿಂದ ಗಾಂಧಿಯ ಕನ್ನಡಕ. ೨೭ರಂದು ಒಲವಿನ ಜಂಕ್ಷನ್, ೨೮ರಂದು ಮಹಿಳಾ ಭಾರತ ನಾಟಕಗಳು ಪ್ರದರ್ಶನವಾಗಲಿವೆ. ಗಾಂಧಿ ನಾಟಕವನ್ನು ಡಾ.ಲವ ಜಿ.ಆರ್., ಒಲವಿನ ಜಂಕ್ಷನ್ ನಾಟಕವನ್ನು ಅಜೇಯ್ ನಿನಾಸನ್, ಮಹಿಳಾ ಭಾರತ ನಾಟಕವನ್ನು ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಲಿದ್ದಾರೆ.
ವಿಶ್ವರಂಗದ ದಿನಾಚರಣೆ ಪ್ರಯುಕ್ತ ರಂಗಗೀತೆಗಳ ಗಾಯನ ಕಾರ್ಯಕ್ರಮವು ಇರುತ್ತದೆ. ಮೂರು ದಿನದ ನಾಟಕಗಳು ಪ್ರತಿ ದಿನ ಸಂಜೆ ೬.೪೫ಕ್ಕೆ ಆರಂಭವಾಗುತ್ತವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ೨೬ರಂದು ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ೨೭ರಂದು ಎ.ಎಸ್.ಪಿ. ಅನಿಲ್ಕುಮಾರ್ ಭೂಮರೆಡ್ಡಿ, ೨೮ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಉಮೇಶ್ ಅವರು ಉದ್ಘಾಟನೆ ಮಾಡಲಿದ್ದಾರೆ, ಹಾಗೆಯೇ ೨೭ರಂದು ಜಿ.ಆರ್.ಲವ, ಅಜೇಯ ನಿನಾಸಂ ಚಂದ್ರಶೇಖರ್ ಹಿರೇಗೋಣೆಗೇರೆ ಅವರನ್ನು ಸನ್ಮಾನಿಸಲಾಗುವುದು ಎಂದರು.
ಈ ನಾಟಕೋತ್ಸವದಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಭಾಗವಹಿಸುತ್ತಾರೆ. ಹಾಗೆಯೇ ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವು ವರ್ಷಕ್ಕೆ ೧೦ ತಂಡಗಳಿಂದ ನಾಟಕಗಳನ್ನು ಪ್ರದರ್ಶಿಸುವ ಗುರಿ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಸಾಸುವೆಹಳ್ಳಿ ಸತೀಶ್, ಡಾ. ಲವ ಜಿ.ಆರ್., ಸುರೇಶ್ ಇದ್ದರು.
ಪತ್ರಿ ನಾಟಕಕ್ಕೆ ೫೦ ರೂ.ಗಳು ೩ ನಾಟಕಕ್ಕೂ ಸೇರಿ ೧೦೦ ರೂ. ಪ್ರವೇಶ ದರವನ್ನು ನಿಗಧಿ ಮಾಡಲಾಗಿದೆ.