ಶಂಕರಘಟ್ಟ: ಪರಿಸರ ಮಾಲಿನ್ಯ ತಡೆಗಟ್ಟುವ ಮೂಲಕ ಹಸಿರು ಆರ್ಥಿಕತೆಯೆಡೆಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಭಾರತ ಸಮಗ್ರವಾದ ಹಸಿರು ನೀತಿ ಅಳವಡಿಸಿಕೊಳ್ಳಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗ ಪರಿಸರ ಸಂರಕ್ಷಣೆಗೆ ಹಸಿರು ಪರಿಹಾರ ಕುರಿತು ಗುರುವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಊಹಿಸಲಸಾಧ್ಯವಾದ ಆವಿಷ್ಕಾರಗಳು ೨೦ನೇ ಶತಮಾನದಿಂದೀಚೆಗೆ ನಡೆದಿವೆ. ಒಟ್ಟಾರೆ ನಾಗರಿಕತೆಯ ರಚನಾತ್ಮಕ ಅಭಿವೃದ್ಧಿಯ ದೃಷ್ಟಿಕೋನದಿಂದ ಕೈಗೊಂಡ ಪರಮಾಣು ಸಂಶೋಧನೆಯಂತಹ
ಕೆಲವು ಚಟುವಟಿಕೆಗಳು ಮನುಕುಲಕ್ಕೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅಸಂಪ್ರದಾಯಿಕ ಇಂಧನ ಮೂಲಗಳ ಬಳಕೆ ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ತೇಜನ ನೀಡುವುದು ಮತ್ತಿತರ ಉಪಕ್ರಮಗಳು ಸೇರಿದಂತೆ ಸಮಗ್ರವಾದ ಹಸಿರು ನೀತಿ ಅಳವಡಿಸಿಕೊಳ್ಳುವುದು ಸುಸ್ಥಿರ ಅಭಿವೃದ್ಧಿಗೆ ಅನಿವಾರ್ಯ ಎಂದು ಪ್ರತಿಪಾದಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ. ಟಿ. ಪುಟ್ಟಯ್ಯ ಮಾತನಾಡಿ ವಾಯುಮಾಲಿನ್ಯ, ಜಲಮಾಲಿನ್ಯ ನಿಯಂತ್ರಣ, ತ್ಯಾಜ್ಯನಿರ್ವಹಣೆಯಲ್ಲಿ ವಿವಿಧ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ನಾಗರಿಕ
ಸಂಘಟನೆಗಳ ಸಾಮೂಹಿಕ ಪ್ರಯತ್ನ ಅತ್ಯಗತ್ಯ ಎಂದರು.
ಕುಲಸಚಿವ ಮಂಜುನಾಥ್. ಎ. ಎಲ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಪ್ರೊ. ಸುನಿಲ್ ನೌತಿಯಾಲ್, ಸುಜಿತ್ ಕುಮಾರ್ ಡೋಂಗ್ರೆ, ಡಾ. ಶರತ್ ಚಂದ್ರ, ವಿಭಾಗದ ಅಧ್ಯಕ್ಷ ಪ್ರೊ. ಕೆ. ಯೋಗೇಂದ್ರ, ಪ್ರೊ. ಜೆ. ನಾರಾಯಣ, ಡಾ. ಹೀನಾ ಕೌಸರ್, ಡಾ. ಬಸವರಾಜಪ್ಪ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.