ಶಿವಮೊಗ್ಗ,ಮಾ.೧೬: ಕೊಲೆ ಬೆದರಿಕೆ ಹಾಕಿ ಚಿತ್ರ ಹಿಂಸೆ ನೀಡಿದ ಪತಿ ಪವನ್ ಮತ್ತು ಅತ್ತೆಯನ್ನು ಬಂಧಿಸಬೇಕು. ದೂರು ಕೊಟ್ಟರು ಕ್ರಮ ತೆಗೆದುಕೊಳ್ಳದ ಭದ್ರಾವತಿ ಹೊಸಮನೆ ಪೊಲೀಸ್‌ಠಾಣೆ ಅಧಿಕಾರಿಗಳ ಮೇಲೆ ತನಿಖೆ ನಡೆಸಬೇಕು ಎಂದು ಭದ್ರಾವತಿಯ ನೊಂದ ಮಹಿಳೆ ಜನನಿ ಯಾನೆ ಜ್ಞಾನೇಶ್ವರಿನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
೨೦೨೩ರ ಅ.೨೮ರಂದು ನಮ್ಮ ಮದುವೆ ಡಾ.ಪವನ್ ಕೆ. ಅವರೊಂದಿಗೆ ಆಯಿತು. ಪವನ್ ಕೆ. ರವರು ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಮದುವೆಯಾದ ೭ ತಿಂಗಳಿನಲ್ಲಿಯೇ ವಿನಾಕಾರಣ ನನ್ನ ಗಂಡ ಮತ್ತು ಅತ್ತೆ ಕಿರಕುಳ ನೀಡುತ್ತಿದ್ದಾರೆ. ನಿಮಗೆ ಇನ್ನೊಂದು ಹೆಣ್ಣಿನ ಅನೈತಿಕ ಸಂಬಂಧವಿದೆ ಎಂದು ಹೇಳಿದ್ದಕ್ಕೆ ಅಡಿಗೆ ಮನೆಯಿಂದ ಚಾಕು ತಂದು ನನ್ನ ಕೊಲೆ ಮಾಡಲು ಪ್ರಯತ್ನಿಸಿದರು. ನಾನು ಅದು ಹೇಗೋ ತಪ್ಪಿಸಿಕೊಂಡೆ ಎಂದರು.
ಹೀಗೆ ಕಿರುಕುಳ ನೀಡಿದ ನನ್ನ ಅತ್ತೆ ಮತ್ತು ಪತಿಯ ವಿರುದ್ಧ ದಾವಣಗೆರೆಯ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ದೂರು ಕೊಟ್ಟಿದ್ದೇನೆ. ಮತ್ತು ಹೊಸಮನೆಯ ಶಿವಾಜಿ ವೃತ್ತ ಪೊಲೀಸ್ ಠಾಣೆಯ ಸಬ್ ಇನ್ಸ್‌ಫೆಕ್ಟರ್ ಕೃಷ್ಣಕುಮಾರ್ ಅವರಿಗೂ ದೂರು ಕೊಟ್ಟಿದ್ದೇನೆ. ಎಫ್.ಐ.ಆರ್. ಆಗಿದ್ದರೂ ಕೂಡ ಇದುವರೆಗೂ ಅವರನ್ನು ಬಂಧಿಸಿಲ್ಲ. ಆದ್ದರಿಂದ ಕೃಷ್ಣಕುಮಾರ್ ಹಾಗೂ ಠಾಣೆಯ ಸೆಂಟ್ರಿ ಸುನೀತಾ ಅವರ ಮೇಲೂ ಕೂಡ ಕ್ರಮ ತೆಗೆದುಕೊಳ್ಳಬೇಕು ಎಂದರು.
ಜನನಿಯ ತಾಯಿ ಗೀತಾ ಮಾತನಾಡಿ, ಅಳಿಯ ಡಾಕ್ಟರ್ ಆಗಿದ್ದಾನೆ ಎಂದು ಮದುವೆ ಮಾಡಿಕೊಟ್ಟೆ, ನನ್ನ ಮಗಳಿಗೆ ಕೇವಲ ೨೩ ವರ್ಷ, ಈ ಚಿಕ್ಕ ವಯಸ್ಸಿನ ಮಗುವಿಗೆ ತುಂಬ ಕಿರುಕುಳ ನೀಡಿ ಜೀವ ತೆಗೆಯಲು ಹೊರಟಿದ್ದಾರೆ. ಭವಿಷ್ಯ ಚೆನ್ನಾಗಿರಬೇಕು ಎಂದು ಇರುವ ಅಡಿಕೆ ತೋಟ ಮಾರಿ ಮದುವೆ ಮಾಡಿದೆ. ಬೇರೆ ಹೆಣ್ಣಿನ ಜೊತೆ ಅನೈತಿಕ ಸಂಬಂಧವಿದೆ ಎಂದು ಹೇಳಿದ್ದಕ್ಕೆ ಈ ರೀತಿಯ ಹಿಂಸೆ ಕೊಡುತ್ತಿದ್ದಾರೆ. ಮದುವೆ ಆಗಿನಿಂದಲೂ ನನ್ನ ಮಗಳಿಗೆ ಒಂದಲ್ಲ ಒಂದು ವಿಧದಿಂದ ಸಾಯಿಸುವ ಪ್ರಯತ್ನದಲ್ಲಿದ್ದಾರೆ. ಆದರೂ ನನ್ನ ಮಗಳು ಹೇಳಿರಲಿಲ್ಲ ಕುತ್ತಿಗೆ ಹಿಚುಕಿ ಸಾಯಿಸಲು ಬಂದಾಗ ಆಕೆ ಹೊರಗೆ ಓಡಿ ಬಂದು ನನ್ನ ಮನೆಗೆ ಬಂದಿದ್ದಾಳೆ ಎಂದರು.
ನಮಗೆ ಯಾರ ನೆರವೂ ಇಲ್ಲ, ನನ್ನ ಅಳಿಯ ನನ್ನ ಹತ್ತಿರ ದುಡ್ಡಿದೆ, ನೀವೇನು ಮಾಡಲು ಆಗುವುದಿಲ್ಲ ಎಂದು ಹೇಳುವುದಲ್ಲದೇ, ನಿಮ್ಮ ಇಡೀ ಕುಟುಂಬಕ್ಕೆ ಬೆಂಕಿ ಹಚ್ಚುತ್ತೇನೆ ಎಂದು ಹೇಳುತ್ತಾನೆ. ಎಫ್.ಐ.ಆರ್. ಆಗಿ ೫ ದಿನಗಳು ಕಳೆದರೂ ಕೂಡ ಅವರನ್ನು ಬಂಧಿಸಿಲ್ಲ. ಜೊತೆಗೆ ಹೊಸಮನೆ ಪೊಲೀಸರು ಕೂಡ ಇದಕ್ಕೆ ಶಾಮಿಲಾಗಿದ್ದಾರೆ. ನನ್ನ ಮಗಳಿಗೆ ನ್ಯಾಯ ಕೊಡಿಸಬೇಕು ಎಂದರು.
ಸಾಮಾಜಿಕ ಹೋರಾಟಗಾರ್ತಿ ಉಷಾನಾಯಕ್ ಮಾತನಾಡಿ, ಇದೊಂದು ಅಮಾನವೀಯ ಘಟನೆ ಹುಡುಗಿಯನ್ನು ನೋಡಿದಾಗ ಕರುಳು ಕಿತ್ತುಬರುತ್ತದೆ. ಮಹಿಳಾ ಸಂಘಟನೆಗಳೆಲ್ಲ ಸೇರಿಕೊಂಡು ಅವರ ವಿರುದ್ಧ ಹೋರಾಟ ಮಾಡುತ್ತೇವೆ. ಬೇರೆ ಯಾರಿಗೂ ಈ ರೀತಿಯ ಮೋಸವಾಗಬಾರದು, ಜಿಲ್ಲಾ ಮಂತ್ರಿ, ಜಿಲ್ಲಾಡಳಿತ, ಮಹಿಳಾ ಆಯೋಗಕ್ಕೂ ತಿಳಿಸಲಾಗುವುದು ಎಂದರು.