ಸಾಗರ: ಭಾರತಕ್ಕೆ ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದರಿಂದ ಅಡಕೆಯ ಬೆಲೆಯಲ್ಲಿನ ತೀವ್ರ ಇಳಿತ ಮತ್ತು ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ. ತಕ್ಷಣದಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮ ಆಮದಿನ ನಿರ್ಬಂಧಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಸೋಮವಾರ ಸ್ಪಷ್ಟ ಭರವಸೆ ನೀಡಿದರು.

ಅಡಕೆಯ ಅಕ್ರಮ ಆಮದು ಕಾರಣದಿಂದ ಆಗಿರುವ ಅನಾಹುತಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಅಡಕೆ ಸಹಕಾರ ಸಂಘಗಳ ಮಹಾಮಂಡಲದ ನೇತೃತ್ವದಲ್ಲಿ ಭೇಟಿ ಮಾಡಿದ ನಿಯೋಗಕ್ಕೆ ಧೈರ್ಯ ತುಂಬುವ ಮಾತನಾಡಿದ ಅವರು, ದೇಶದ ಗಡಿಗಳಲ್ಲಿರುವ ಅಧಿಕಾರಿಗಳಿಗೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಕ್ಕೆ ಸೂಚಿಸುತ್ತೇನೆ ಎಂದರು.

ನಿಯೋಗದ ನೇತೃತ್ವ ವಹಿಸಿದ್ದ ಕ್ರ್ಯಾಮ್ ಅಧ್ಯಕ್ಷ ಹೆಚ್.ಎಸ್. ಮಂಜಪ್ಪ ಹೊಸಬಾಳೆ ಬೆಳೆಗಾರರ ಸಂಕಷ್ಟಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ, ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲೂಕುಗಳಲ್ಲಿ ಶೇ. ೮೦ರಷ್ಟು ಸಾಂಪ್ರದಾಯಿಕ ಬೆಳೆಗಾರರಿದ್ದು ಹಿಡುವಳಿ ಅತ್ಯಂತ ಕಡಿಮೆ. ಇಂತವರ ಬದುಕಿನಲ್ಲಿ ಅಡಿಕೆ ಬೆಲೆ ಕುಸಿತದ ನೇರ ಪರಿಣಾಮ ಬೀರುತ್ತದೆ. ಅಕ್ರಮ ಆಮದಿನಿಂದ ಸರ್ಕಾರಕ್ಕೆ ಕೂಡ ದೊಡ್ಡ ಪ್ರಮಾಣದ ತೆರಿಗೆಯ ನಷ್ಟವಾಗುತ್ತದೆ. ಅದರ ಜೊತೆಗೆ ಅಡಕೆ ಬೆಲೆ ಕುಸಿತದಿಂದ ವ್ಯಾಪಾರಿ ವಲಯ, ನಿರ್ಮಾಣ ರಂಗದಲ್ಲೂ ಪ್ರಭಾವ ಬೀರುವುದರಿಂದ ತೆರಿಗೆ ಸಂಗ್ರಹದಲ್ಲಿ ಕುಸಿತ ಉಂಟಾಗುತ್ತದೆ. ಹಾಗಾಗಿ ಕಾನೂನುಬದ್ಧ ಕ್ರಮಗಳ ಮೂಲಕವೇ ಈ ರೀತಿ ಅಡಕೆ ಮಾರುಕಟ್ಟೆಗೆ ಬರುವುದನ್ನು ತಡೆಯಬೇಕು ಎಂದು ವಿನಂತಿಸಿದರು.

ನಿಯೋಗದಲ್ಲಿ ಅಡಕೆ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಸಾಗರದ ಆಪ್ಸ್‌ಕೋಸ್ ಸಂಸ್ಥೆ ಅಧ್ಯಕ್ಷ ಬಿ.ಎ. ಇಂಧೂದರಗೌಡ, ಮ್ಯಾಮ್‌ಕೋಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ಶಿರಸಿ ಟಿಎಸ್‌ಎಸ್‌ನ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!