ಶಿವಮೊಗ್ಗ,ಫೆ.೨೧: ಶ್ರೀಗುರು ಶಾಂತವೀರೇಶ್ವರ ಸೇವಾ ಸಮಿತಿ ವತಿಯಿಂದ ಫೆ.೨೩ರಂದು ಬೆಳಿಗ್ಗೆ ೯ಕ್ಕೆ ಗೋಪಾಳದ ದ್ರೌಪದಮ್ಮ ದೇವಸ್ಥಾನದ ಹತ್ತಿರವಿರುವ ಸಿಂದಗಿ ಶಾಂತವೀರೇಶ್ವರ ನಿವಾಸದಲ್ಲಿ ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್.ಹೇಳಿದರು
.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುರು ಶಾಂತವೀರೇಶ್ವರ ಸೇವಾ ಸಮಿತಿಯು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟ ವಸತಿ ಶಿಕ್ಷಣ ನೀಡುವ ಉದ್ದೇಶದಿಂದ ಇಂಟರ್ನ್ಯಾಷನಲ್ ಸ್ಕೂಲ್ ಆರಂಭಿಸುವ ಯೋಜನೆಯು ಇದೆ ಎಂದರು.
ತಮ್ಮ ಶಾಂತವೀರೇಶ್ವರ ನಿವಾಸದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಇಷ್ಟಲಿಂಗ ಮಹಾಪೂಜೆಯನ್ನು ನಡೆಸಲಾಗುವುದು. ಕಾಶಿಯ ಜ್ಞಾನಸಿಂಹಸಾನಧೀಶ್ವರ ಶ್ರೀ ೧೦೦೮ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ. ಹಾಗೂ ಮಧ್ಯಾಹ್ನ ೧೨ಕ್ಕೆ ಧರ್ಮಸಭೆಯನ್ನು ಆಯೋಜಿಸಲಾಗಿದೆ ಎಂದರು.
ತಮ್ಮ ಸಂಸ್ಥೆಯವತಿಯಿಂದ ಶ್ರೀಗುರು ಶಾಂತವೀರೇಶ್ವರ ಲಿಂಗಾಯಿತ ವಧುವರರ ಅನ್ವೇಷಣೆ ಕೇಂದ್ರದ ಮೂಲಕ ಕಳೆದ ೨೪ ವರ್ಷಗಳಿಂದ ವಧು-ವರರ ಸಮಾವೇಶವನ್ನು ಆಯೋಜಿಸುತ್ತ ಬಂದಿದ್ದು, ಸಾವಿರಾರು ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಿದ್ದೇವೆ. ಹಾಗೆಯೇ ಎಸ್ಜಿಎಸ್ ಟೂರ್ಸ್ ಮೂಲಕ ಸಿಂಗಾಪುರ, ಮಲೇಷಿಯ, ದುಬೈ ಸೇರಿದಂತೆ ಹಾಗೂ ಕಾಶಿ, ಕೇದಾರ, ಗಂಗೋತ್ರಿ, ಗಯಾ, ಕನ್ಯಾಕುಮಾರಿ, ರಾಮೇಶ್ವರ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಯಾತ್ರೆಯನ್ನು ಕೂಡ ಆಯೋಜಿಸಿದ್ದೇವೆ ಎಂದರು.
ಹಾಗೆಯೇ ಎಸ್ಜಿಎಸ್ ಡೆವಲಪರ್ಸ್ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ನಿವೇಶನ ನೀಡುವ ಸಂಕಲ್ಪ ಕೂಡ ಹೊಂದಿದ್ದೇವೆ. ಶ್ರೀಶೈಲ ಗೃಹ ನಿರ್ಮಾಣ ಸಹಕಾರ ಸಂಘವನ್ನು ಸ್ಥಾಪಿಸಿ ಈಗಾಗಲೇ ಹಲವರಿಗೆ ಆನಂದಧಾಮ ಬಡಾವಣೆಯ ಮೂಲಕ ನಿವೇಶನವನ್ನು ವಿತರಿಸಲಾಗಿದೆ. ಅಲ್ಲಿ ೬ ತಿಂಗಳೊಳಗೆ ಮನೆ ಕಟ್ಟುವವರಿಗೆ ೧ಲಕ್ಷ ನೆರವು ಕೂಡ ನೀಡಲಾಗುವುದು ಎಂದರು
.
ಖಜಾಂಚಿ ಲೋಕೇಶಯ್ಯ ಮಾತನಾಡಿ, ಮಹಾಲಿಂಗಯ್ಯ ಶಾಸ್ತ್ರಿಗಳು ಹಲವು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ. ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಶ್ರೀಶೈಲ, ಆನಂದಪುರ, ಕಾಶಿ ಪೀಠ, ಉಜ್ಜೈಯಿನಿ ಪೀಠ ಮುಂತಾದ ಹಲವು ಮಠಾಧೀಶರರು ಗೌರವ ಪುರಸ್ಕಾರ ನೀಡಿದ್ದಾರೆ. ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ಸರಳ, ಸಜ್ಜನಿಕೆ, ಸ್ನೇಹಜೀವಿಯಾದ ಮಹಾಲಿಂಗಯ್ಯ ಶಾಸ್ತ್ರಿಗಳು ಈಗ ಇಷ್ಟಲಿಂಗ ಮಹಾಪೂಜೆ ನಡೆಸುತ್ತಿರುವುದು ವಿಶೇಷವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಜೆ.ರಾಜಶೇಖರ್, ಮಹಾಲಿಂಗಯ್ಯ, ಕಾಂತರಾಜ್, ಚೆನ್ನಬಸಪ್ಪ, ಈಶ್ವರಯ್ಯ, ಶಾಂತವೀರಯ್ಯ, ಸುಮಮಹಾಲಿಂಗಯ್ಯ, ಹಾರ್ನಹಳ್ಳಿ ಕರಿಬಸಯ್ಯ ಇದ್ದರು.