ಶಿವಮೊಗ್ಗ: ಬಿಟ್ಟು ಬಿಡದೇ ಕಾಡುತ್ತಿರುವ ಕೊರೊನಾ ಸೋಂಕಿತರಿಗೆ ಶಿವಮೊಗ್ಗ ನಿಗಧಿತ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿದ್ದು, ಸೋಂಕಿತರ ಅರ್ಧದಷ್ಟು ಪ್ರಮಾಣದ ಜನ ಈಗಾಗಲೇ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ನಡುವೆ ಚನ್ನಗಿರಿ ಮೂಲದ ಸುಮಾರು 56 ವರ್ಷದ ಮಹಿಳೆಯೊಬ್ಬರು ನಿನ್ನೆ ರಾತ್ರಿ ಶಿವಮೊಗ್ಗ ಕೋವಿಡ್-೧೯ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದ ಈ ಮಹಿಳೆ ಕೊರೊನಾ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಬಂದಿದ್ದು, ಅವರು ಸಾವು ಕಂಡಿದ್ದು ದಾವಣಗೆರೆ ಜಿಲ್ಲೆಯ ದಾಖಲಾತಿಯಲ್ಲಿ ಸೇರ್ಪಡೆಯಾಗಬಹುದೆನ್ನಲಾಗಿದೆ. ಇಲ್ಲವೇ ಶಿವಮೊಗ್ಗದ ಹೆಸರಲ್ಲಿ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಸಂಜೆಯ ಹೊತ್ತಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ವರದಿಯಲ್ಲಿ ಬಿಂಬಿತವಾಗಲಿದೆ.
ಈಗಾಗಲೇ 101 ಸೋಂಕಿತರನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಸೋಂಕಿತರ ಸೇರ್ಪಡೆಯಾಗಲಿದೆ ಎಂದು ಇದೇ ಮೂಲಗಳು ತಿಳಿಸಿವೆ. ಶತಕ ದಾಟಿರುವ ಸೋಂಕಿತರ ಸಂಖ್ಯೆ 104 ಎಂದು ಹೊರಬರಲಿದೆ.
11479 ಜನರ ಪರೀಕ್ಷೆ ಈಗಾಗಲೇ ಮುಗಿದಿದ್ದು, ಇದರಲ್ಲಿ 11074 ಜನರಿಗೆ ನೆಗಿಟಿವ್ ಬಂದಿದೆ. ನಿನ್ನೆ ಸಂಜೆಯ ಮಾಹಿತಿಯಂತೆ 101 ಸೋಂಕಿತರಿದ್ದು, 304 ಜನರ ಫಲಿತಾಂಶವನ್ನು ನಿರೀಕ್ಷಿಸಲಾಗಿತ್ತು. ಇದರಲ್ಲಿ ಮೂವರಿಗೆ ಸೋಂಕು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಕುಂಬಾರಗುಂಡಿಯ 54 ವರ್ಷದ ವ್ಯಕ್ತಿಯಿಂದ ಈಗ ಅಲ್ಲಿಯ ಪ್ರಕರಣ ನಾನಾ ಕಡೆ ಹರಡಿದ್ದು, ವೃದ್ದರಿಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ.
ನಮ್ಮನ್ನು ಕಾಯಲು ಹೋದ ಪೊಲೀಸರು ಸೇರಿದಂತೆ ವ್ಯಾಪಾರ ವಹಿವಾಟಿಗಾಗಿ ದೂರದ ರಾಜ್ಯಕ್ಕೆ ಹೋಗಿದ್ದ ಹಕ್ಕಿಪಿಕ್ಕಿ ಕ್ಯಾಂಪ್‌ನ ಜನರಿಗೆ ಈ ಭಾದೆ ಬಿಟ್ಟು ಬಿಡದೇ ಕಾಡುತ್ತಿರುವುದು ಆತಂಕ ಸೃಷ್ಠಿಸಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಇನ್ನಷ್ಟು ಬಿಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇದು ಯಶಸ್ವಿಯಾಗಲು, ಕೊರೊನಾ ಸೋಂಕು ಹರಡದಿರಲು ನಾವು ಜಾಗೃತರಾಗುವ ಅವಶ್ಯಕತೆ ಎದ್ದು ಕಾಣುತ್ತಿದೆ.