ನಕ್ಸಲ್ ಆರೋಪ ಹೊತ್ತು ಪೊಲೀಸರಿಗೆ ಬೇಕಾಗಿದ್ದ ಶಂಕಿತ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಇಂದು ಶಿವಮೊಗ್ಗದ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಅವರ ಮೇಲಿದ್ದ ೩ ಪ್ರಕರಣಗಳ ಪೈಕಿ ೨ ಪ್ರಕರಣಗಳ ವಿಚಾರಣೆ ಇಂದು ನಡೆದಿದ್ದು, ನಾಳೆ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದ್ದು, ನಾಳೆ ಮತ್ತೊಮ್ಮೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.


ಬಿ.ಜಿ.ಕೃಷ್ಣಮೂರ್ತಿ ಅವರ ಪರ ವಕಾಲತ್ತು ವಹಿಸಿರುವ ವಕೀಲ ಶ್ರೀಪಾಲ್ ಅವರು ಇಂದು ಸುದ್ಧಿಗಾರರೊಂದಿಗೆ ಮಾತನಾಡಿ ಬಿ.ಜಿ.ಕೃಷ್ಣಮೂರ್ತಿ ಅವರ ವಿರುದ್ಧ ಆಗುಂಬೆ ಫಾರೆಸ್ಟ್ ಗೇಟ್ ಧ್ವಂಸ ಪ್ರಕರಣ, ಬಿದರಗೂಡು ಅರುಣ್ ಎಂಬುವವರ ಮನೆಯ ದರೋಡೆ ಪ್ರಕರಣ ಹಾಗೂ ಹೊಸಗದ್ದೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ ಎಂದರು.


ಇಂದು ೨ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ. ನಾಳೆ ಬಸ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಈ ಪ್ರಕರಣದಲ್ಲಿ ಅವರು ೩ನೇ ಆರೋಪಿಯಾಗಿದ್ದಾರೆ. ಹೊಸಗದ್ದೆ ಪ್ರಭಾ ಮೊದಲನೇ ಆರೋಪಿಯಾಗಿದ್ದಾರೆ. ಉಳಿದೆರಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರೇ ಮೊದಲ ಆರೋಪಿಯಾಗಿದ್ದಾರೆ ಎಂದರು.


ಕೃಷ್ಣಮೂರ್ತಿ ಅವರ ವಿರುದ್ಧ ಸುಮಾರು ೬೨ ಪ್ರಕರಣಗಳಿವೆ. ಕೇರಳದಲ್ಲಿ ೪, ಬೆಂಗಳೂರಿನಲ್ಲಿ ೧೮, ಉಡುಪಿ, ಕಾರ್ಕಳ, ಶೃಂಗೇರಿ, ತೀರ್ಥಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ೨೦೦೭,೨೦೦೯ ಮತ್ತು೨೦೨೧ರ ೩ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ. ೨೦೨೧ರ ನವೆಂಬರ್‌ನಲ್ಲಿ ಕೇರಳದಲ್ಲಿ ಕೃಷ್ಣಮೂರ್ತಿ ಬಂಧನವಾಗಿತ್ತು.
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕೃಷ್ಣಮೂರ್ತಿಯವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ಮುಗಿಸಿದ ನಂತರ ಮತ್ತೇ ಕೇಂದ್ರ ಕಾರಾಗೃಹಕ್ಕೆ ಅವರನ್ನು ಪೊಲೀಸರು ಕರೆದುಕೊಂಡು ಹೋದರು.

By admin

ನಿಮ್ಮದೊಂದು ಉತ್ತರ

error: Content is protected !!