ಶಿವಮೊಗ್ಗ, ಜ.26: ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ರವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರಿಗೆ ಮನವಿ ಮೂಲಕ ಆಗ್ರಹಿಸಿದೆ.
ಇತ್ತೀಚೆಗೆ ಅಷ್ಟೇ ಕಾಂಗ್ರೆಸ್ಗೆ ಸೇರಿಕೊಂಡಿರುವ ಆಯನೂರು ಮಂಜುನಾಥ್ ಇನ್ನು ಬಿಜೆಪಿ ಮನಸ್ಥಿತಿಯಲ್ಲಿಯೇ ಇದ್ದಾರೆ. ಉದ್ದೇಶ ಪೂರ್ವಕವಾಗಿ ಮೂಲ ಕಾಂಗ್ರೆಸ್ ನಾಯಕರನ್ನು ಅವಮಾನಿಸುತ್ತಾರೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವ ನಾಯಕ ನಿಕಟಪೂರ್ವ ಕಾಂಗ್ರೆಸ್ ಅಭ್ಯರ್ಥಿ ಎಸ್.ಯೋಗೀಶ್ರವರನ್ನು ಯಾರು ಅವನು ಎಂದು ಹೇಳುವ ಮೂಲಕ ಅಪಮಾನಿಸಿದ್ದಾರೆ ಎಂದು ಮನವಿದಾರರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಕೇವಲ 7 ಸಾವಿರ ಮತ ಪಡೆದಿದ್ದಾರೆ. ಹೆಚ್.ಸಿ.ಯೋಗೀಶ್ 70 ಸಾವಿರ ಪಡೆದಿದ್ದಾರೆ. ಇಂತಹ ವ್ಯಕ್ತಿ ಯಾರು ಎಂದು ಆಯನೂರು ಮಂಜುನಾಥ್ರವರಿಗೆ ಗೊತ್ತಿಲ್ಲವೇ. ಅಲ್ಲದೇ ಇವರು ಈ ಹಿಂದೆ ರಾಹುಲ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.
ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದನ್ನು ಮರೆತಿದ್ದಾರೆ. ಇನ್ನೂ ಬಿಜೆಪಿ ಮನಸ್ಥಿತಿಯಲ್ಲಿಯೇ ಇದ್ದಾರೆ. ಈಶ್ವರಪ್ಪನವರನ್ನು ಹೊರತುಪಡಿಸಿದರೆ ಬಿ.ವೈ.ರಾಘವೇಂದ್ರ,ವಿಜಯೇಂದ್ರ, ಯಡಿಯೂರಪ್ಪನವರ ವಿರುದ್ಧ ಒಂದೇ ಒಂದು ಮಾತನಾಡಿಲ್ಲ. ಇಂತಹ ವ್ಯಕ್ತಿ ಕಾಂಗ್ರೆಸ್ನಲ್ಲಿ ಇರುವುದು ಸರಿಯಲ್ಲ. ಆದ್ದರಿಂದ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಅಧ್ಯಕ್ಷ ಎಂ.ಎಸ್.ಶಿವಕುಮಾರ್, ಪ್ರಮುಖರಾದ ದೇವೇಂದ್ರಪ್ಪ, ಮಧುಸೂದನ್, ಸ್ವರೂಪ್, ಬಾಲಾಜಿ, ಅರ್ಜುನ್ ಪಂಡಿತ್, ವಿಶ್ವನಾಥ್ ಕಾಶಿ, ಮಹಾದೇವ್, ವಿನಯ್ ಸೇರಿದಂತೆ ಹಲವರಿದ್ದರು.