ಶಿವಮೊಗ್ಗ,ಜ.11: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವ ಜನತೆ ಪಾಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಕರೆ ನೀಡಿದರು.
ಅವರು ಇಂದು ಬೆಳಿಗ್ಗೆ ನಗರದ ಭಗವಾನ್ ಮಹಾವೀರ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ದೊಡ್ಡದು. ಸ್ವಾಮಿ ವಿವೇಕಾನಂದರು ಯುವಜನತೆ ಎಚ್ಚೆತ್ತುಕೊಂಡರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದು ಮನಗಂಡಿದ್ದರು. ಅದಕ್ಕಾಗಿ ಅವರು ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅವರ ಆದರ್ಶಗಳು ಎಂದಿಗೂ ಪ್ರಸ್ತುತ ಎಂದ ಅವರು ಇಂದು ಯುವ ಜನತೆ ನಿರುದ್ಯೋಗ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಅದಕ್ಕಾಗಿ ಯುವಕರನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹಜ್ಜೆ ಇಟ್ಟಿದೆ ಎಂದರು.


ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ನೀಡಿತ್ತು. ಅದರಂತೆ ಹಸಿದವರಿಗೆ ಅನ್ನ, ಪ್ರತಿ ಮನೆಗೂ ಉಚಿತ ವಿದ್ಯುತ್, ಮಾಸಿಕ 2 ಸಾವಿರ ರೂ.ಗಳ ಗೃಹಲಕ್ಷ್ಮೀ ಹಾಗೂ ಮಹಿಳೆಯರಿಗೆ ಬಲ ತುಂಬುವ ‘ಶಕ್ತಿ’ ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ಪದವೀಧರರಿಗೆ ಉದ್ಯೋಗ ಗಳಿಸಲು ಅನುಕೂಲವಾಗುವಂತೆ ನಿರುದ್ಯೋಗ ಭತ್ಯೆ ನೀಡುತ್ತಿದೆ. ನಾಳೆ ಕಾಂಗ್ರೆಸ್‍ನ 5ನೇ ಗ್ಯಾರಂಟಿಯಾದ ‘ಯುವ ನಿಧಿ’ ಯೋಜನೆಯನ್ನು ಶಿವಮೊಗ್ಗದಲ್ಲಿ ವಿವೇಕಾನಂದರ ಜಯಂತಿಯಂದೇ ಜಾರಿಗೊಳಿಸಲಾಗುತ್ತಿದೆ ಎಂದರು.


ಯುವನಿಧಿ ಯೋಜನೆಯು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಕರಿಗೆ ಆಶಾಕಿರಣವಾಗಿದ್ದು, ಯೋಜನೆಯ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಮಾತನಾಡಿ, ನಾಳೆ ಜಾರಿಗೊಳಿಸುತ್ತಿರುವ ಯುವನಿಧಿ ಯೋಜನೆಯ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳೂ ಪಡೆದುಕೊಳ್ಳಬೇಕು. ನಾಳಿನ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಆಗಮಿಸಿ, ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕೆಂದರು
ಮಾಜಿ ನಗರಸಭೆ ಅಧ್ಯಕ್ಷ ಬಿ.ಎ. ರಮೇಶ್ ಹೆಗ್ಡೆ ಮಾತನಾಡಿ, ವಿವೇಕಾನಂದರ ಜಯಂತಿಯಂದೇ ಯುವನಿಧಿ ಜಾರಿಗೊಳಿಸುತ್ತಿರುವುದು ಹೆಮ್ಮೆಯ ವಿಷಯ. ಅಂದು ವಿವೇಕಾನಂದರು ಯುವಕರಲ್ಲಿ ಜಾಗೃತಿ ಮೂಡಿಸಿದ್ದರು. ಇಂದು ರಾಜ್ಯ ಸರ್ಕಾರ ಯುವಕರಲ್ಲಿ ಚೈತನ್ಯ ತುಂಬುವ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಹೆಚ್.ಫಾಲಾಕ್ಷಿ, ಐಡಿಯಲ್ ಗೋಪಿ, ಸಿ.ಜಿ. ಮಧುಸೂದನ್, ಕೆ. ಚೇತನ್, ಚರಣ್, ಹರ್ಷಿತ್ ,ಪ್ರದೀಪ್,ರವಿ, ಚಂದ್ರೋಜಿ ರಾವ್, ತೌಫಿಕ್, ಆಕಾಶ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!