ಶಿವಮೊಗ್ಗ: ಹೊಸನಗರ ತಾಲೂಕಿನಾದ್ಯಂತ ಅಕ್ರಮ ಕಟ್ಟಡ ಜಾಗಕ್ಕೆ ಸಂಬಂಧಿಸಿದಂತೆ ನಕಲಿ ಹಕ್ಕುಪತ್ರಗಳನ್ನು ನೀಡಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ಯುವ ಘಟಕದ ಜಿಲ್ಲಾಧ್ಯಕ್ಷ ಗಣೇಶ್ ಸೋಗೋಡು ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸನಗರ ತಾಲೂಕಿನಲ್ಲಿ ಅರಣ್ಯ ಜಾಗಗಳು, ಕಂದಾಯ ಜಾಗಗಳು ಯಾರ ಯಾರ ಹೆಸರಿಗೋ ಬೆಳಗಾಗುವದರೊಳಗೆ ಆಗುತ್ತವೆ. ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಬ್ರೋಕರ್ ಗಳೊಂದಿಗೆ ಸೇರಿಕೊಂಡು ಈ ಅವ್ಯವಹಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತೊಂದರೆ ಉಡಾಫೆ ಉತ್ತರ ಕೊಡುತ್ತಾರೆ ಎಂದು ದೂರಿದರು.
ಉದಾಹರಣೆಗೆ ಹೊಸನಗರ ತಾಲೂಕಿನ ಕಸಬಾ ಹೋಬಳಿಯ ಹೊರಕೋಡು ಗ್ರಾಮದ ಸ.ನಂ. ೪೭ ರಲ್ಲಿ ಸುಮಾರು ೨೪೦೦ ಚ. ಅಡಿ ಅಳತೆಯ ಜಾಗಕ್ಕೆ ಮಂಜೂರಾತಿ ಹಕ್ಕುಪತ್ರ ನೀಡಲಾಗಿದೆ. ಈ ಹಕ್ಕುಪತ್ರ ನಕಲಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಸರ್ವೇ ಇಲಾಖೆಯ ಜಿಪಿಎಸ್ ಸರ್ವೇ ಹಾಗೂ ಅರ್ಜಿಗಳ ಸೀರಿಯಲ್ ನಂಬರ್ ಗಳು ಎಸ್.ಬಿ.ಐ. ಚಲನ್ ಸಂಖ್ಯೆ ಕೂಡ ನೀಡಿರುತ್ತಾರೆ. ಈ ಎಲ್ಲಾ ದಾಖಲೆಗಳು ನಕಲಿ ಎಂದು ಸಾಬೀತಾಗಿದೆ. ಇದನ್ನು ಹೇಗೆ ಸೃಷ್ಟಿಸಲು ಸಾಧ್ಯ.
ಇದರ ಹಿಂದೆ ಒಂದು ದೊಡ್ಡ ಜಾಲವೇ ಇದೆ. ಇದರ ವಿರುದ್ಧ ನಮ್ಮ ಪಕ್ಷ ಹೋರಾಟ ಮಾಡುತ್ತದೆ. ಈ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಸಚಿವರು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಶಿವಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್, ಪದಾಧಿಕಾರಿಗಳಾದ ಹಸನಬ್ಬ, ಈಶ್ವರಪ್ಪ ಗೌಡ, ಸುರೇಶ್ ಕೋಟೇಕರ್, ಲಿಂಗರಾಜ್ ಇದ್ದರು.