ಶಿವಮೊಗ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದಲ್ಲಿ ೩೮೦೦ ಆಶ್ರಯ ಮನೆಗಳಿಗೆ ಟೆಂಡರ್ ಕರೆದು ಫಲಾನುಭವಿಗಳಿಂದ ವಂತಿಗೆ ಪಡೆದು ಅಲಾರ್ಟ್ ಮೆಂಟ್ ಮಾಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಎಲ್ಲಾ ಪ್ರಕ್ರಿಯೆ ನಿಂತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.


ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಬಡ ಕುಟುಂಬದ ಹೆಣ್ಣು ಮಕ್ಕಳು ತಮ್ಮ ತಾಳಿ ಅಡವಿಟ್ಟು ಸರ್ಕಾರಕ್ಕೆ ದುಡ್ಡು ಕಟ್ಟಿದ್ದಾರೆ. ಆದರೂ ಸರ್ಕಾರದಿಂದ ವಿಳಂಬವಾಗುತ್ತಿದೆ. ಇದನ್ನು ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ವಸತಿ ಸಚಿವರ ಗಮನಕ್ಕೆ ತಂದಾಗ ಡಿಸೆಂಬರ್ ೧೮ ರ ಸೋಮವಾರ ಅವರು ವಿಶೇಷ ಸಭೆ ಕರೆದಿದ್ದು ನನಗೂ ಕೂಡ ಆಹ್ವಾನ ನೀಡಿದ್ದಾರೆ. ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.


ಸ್ವಾತಂತ್ರ್ಯ ೭೫ ವರ್ಷಗಳ ನಂತರ ಕೆಲವು ಅಭೂತಪೂರ್ವ ಘಟನೆಗಳು ಈ ದೇಶದಲ್ಲಿ ನಡೆದಿವೆ. ಶ್ರೀಕೃಷ್ಣನ ಜನ್ಮ ಸ್ಥಾನ ಮಥುರಾದಲ್ಲಿ ದೇವಸ್ಥಾನಕ್ಕೆ ಹೊಂದಿಕೊಂಡು ಮಸೀದಿ ಇದ್ದು, ಕೆಲ ಭಕ್ತರು ನ್ಯಾಯಾಲಯಕ್ಕೆ ದಾವೆ ಹೂಡಿದ್ದರಿಂದ ಈಗ ಕೋರ್ಟ್ ಸಮೀಕ್ಷೆಗೆ ಆದೇಶ ನೀಡಿದೆ. ಮಸೀದಿ ಒಳಗೆ ಕಮಲದ ಕೆತ್ತನೆ ಶ್ರೀ ಕೃಷ್ಣನ ಚಿತ್ರಗಳು ಸೇರಿದಂತೆ ಹಿಂದೂ ಧಾರ್ಮಿಕ ರಚನೆಗಳು ಕಂಡು ಬಂದಿದ್ದರಿಂದ ಈಗ ನ್ಯಾಯಾಲಯ ಸಮೀಕ್ಷೆಗೆ ಆದೇಶ ನೀಡಿದೆ ಎಂದರು.
ಕಾಶಿಯಲ್ಲೂ ಕೂಡ ವಿಶ್ವನಾಥ ದೇವಸ್ಥಾನ ಒಡೆದು ಅಲ್ಲಿ ಕೂಡ ಜ್ಞಾನವ್ಯಾಪಿ ಮಸೀದಿ ಕಟ್ಟಿದ್ದರು. ಅಲ್ಲಿ ಈಗಾಗಲೇ ಸಮೀಕ್ಷೆ ನಡೆದು ವರದಿ ನೀಡಲಾಗಿದೆ. ೫೦೦ ವರ್ಷಗಳಿಂದ ಅಯೋಧ್ಯೆ ರಾಮಮಂದಿರ ವಿವಾದವನ್ನು ಕೂಡ ನ್ಯಾಯಾಲಯ ಬಗೆಹರಿಸಿದ್ದು ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಆರ್ಟಿಕಲ್ ೩೭೦ ರದ್ದತಿಯನ್ನು ಕೂಡ ನ್ಯಾಯಾಲಯ ಎತ್ತಿ ಹಿಡಿದಿದೆ. ಇದೆಲ್ಲವೂ ಭಾರತದ ಸಂಸ್ಕೃತಿಯನ್ನು ರಕ್ಷಿಸಲು ಹಿರಿಯರು ಮಾಡಿದ ಹೋರಾಟಗಳಿಗೆ ಫಲ ಸಿಕ್ಕಿದೆ ಎಂದರು.


ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡಬೇಕೆಂಬ ಶಾಸಕ ಅಬ್ಬಯ್ಯ ಅವರ ಸಲಹೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಕೆಲವರು ಟಿಪ್ಪುಸುಲ್ತಾನ್ ಗೆ ಜನಿಸಿದವರ ಹಾಗೇ ಆಡುತ್ತಾರೆ. ಅವರಿಗೆ ಇವತ್ತಲ್ಲ ನಾಳೆ ಉತ್ತರ ಸಿಗುತ್ತದೆ ಎಂದರು.
ಸಂಸತ್ ದಾಳಿ ಆಘಾತಕಾರಿ ವಿಷಯ. ಅದರ ಹಿಂದಿನ ಶಕ್ತಿಗಳು ಬೆಳಕಿಗೆ ಬರುತ್ತದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿಯನ್ನು ಕೂಡ ದುಷ್ಟ ಶಕ್ತಿಗಳು ಬಲಿ ಪಡೆದಿದ್ದವು. ಖಲಿಸ್ತಾನ ದುಷ್ಕೃತ್ಯ ಎಸಗಿತ್ತು. ಇನ್ನೂ ಈ ದೇಶದಲ್ಲಿ ಭಯೋತ್ಪಾದಕರ ಕರಿನೆರಳು ಇದೆ. ಆನ ಜಾಗೃತರಾಗಿದ್ದಾರೆ. ಸಂಸದ ಪ್ರತಾಪ್ ಸಿಂಹ ಪ್ರಖರ ಹಿಂದುತ್ವವಾದಿ ಮತ್ತು ರಾಷ್ಟ್ರ ಭಕ್ತ. ಸಂಸತ್ ಪ್ರಕರಣಕ್ಕೆ ಅವರ ಹೆಸರನ್ನು ಜೋಡಿಸಿ ಯಾರೂ ಕೂಡ ರಾಜಕಾರಣ ಮಾಡಬಾರದು ಎಂದರು.


ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸಾತಿ ಹೇಳಿಕೆ ಬಗ್ಗೆ ಮತ್ತು ಈಶ್ವರಪ್ಪನವರು ನಮ್ಮ ಮನೆಗೆ ಬರುವುದು ಬೇಡೆ ಎಂಬ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನಾನು ಅವರ ಮನೆಗೆ ಹೋಗಲು ಸಿದ್ಧನಿಲ್ಲ. ಜಗದೀಶ್ ಶೆಟ್ಟರ್ ಮತ್ತು ಅವರ ತಂದೆ ಹಿಂದುತ್ವದ ಪ್ರತೀಕವಾಗಿದ್ದರು. ಅವರೇ ಹಿಂದೆ ಗೋ ಹತ್ಯೆ ನಿಷೇಧ ಮಸೂದೆಗೆ ಮತ ನೀಡಿದ್ದರು. ಕಾಂಗ್ರೆಸ್ ಗೆ ಹೋಗಿದ್ದಾರೆ. ಈಗ ಅವರು ಕಾಂಗ್ರೆಸ್ ನಿಂದ ಹೊರಗೆ ಬರಲೇ ಬೇಕಾಗುತ್ತದೆ. ಇಂದಲ್ಲ ನಾಳೆ ಅವರು ಮತ್ತೆ ಬಿಜೆಪಿಗೆ ಮರಳುತ್ತಾರೆ ಎಂದರು.
ಗೋಷ್ಠಿಯಲ್ಲಿ ಜಗದೀಶ್, ಚಂದ್ರಶೇಖರ್, ಸಿದ್ಧಲಿಂಗೇಶ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!