ಶಿವಮೊಗ್ಗ,ಡಿ.೧೩: ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯವತಿಯಿಂದ ಡಿ.೨೧ರಂದು ರೋಟರಿ ರಕ್ತ ನಿಧಿ ಸಭಾಂಗಣದಲ್ಲಿ ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್‌ರವರ ನೆನಪಿನ ಸಭೆ ಹಾಗೂ ರಕ್ತದಾನ ಶಿಬಿರವನ್ನು ಬೆಳಿಗ್ಗೆ ೧೦ಗಂಟೆಗೆ ಆಯೋಜಿಸಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎನ್.ಡಿ.ಸುಂದರೇಶ್‌ರವರು ರೈತ ಸಂಘದ ಸಂಸ್ಥಾಪಕರಾಗಿದ್ದಾರೆ. ರೈತರಿಗೆ ಕೃಷಿ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯ, ಅಸಮಧಾನದ ವಿರುದ್ಧ ಯುವಕರನ್ನು ಸಂಘಟಿಸಿ ರಾಜ್ಯದ ಮೂಲೆ ಮೂಲೆಗೆ ತಿರುಗಡೆ ಸುಮಾರು ೧೩ ವರ್ಷಗಳ ಕಾಲ ಅವಿಶ್ರಾಂತವಾಗಿ ದುಡಿದ ಕೆಚ್ಚೆದೆಯ ನಾಯಕ ಹಾಗೂ ರೈತ ಕಣ್ಮಣಿಯಾಗಿದ್ದಾರೆ ಎಂದರು.


ಸುಂದರೇಶ್‌ರವರ ನೆನಪಿನ ಸಭೆ ಹಾಗೂ ರಕ್ತದಾನ ಶಿಬಿರ ಮಾಡುವ ಮೂಲಕ ರೈತ ಸಂಘವು ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಈ ಹಿಂದಿನ ಸರ್ಕಾರ ತಂದಿದ್ದ ರೈತ ವಿರೋಧಿ ಮೂರು ಕೃಷಿ ಕಾಯಿದೆಗಳನ್ನು ವಾಪಾಸು ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ರೈತರ ಐಪಿ ಸೆಟ್ಟುಗಳಿಗೆ ಸ್ವಯಂ ವೆಚ್ಚದಲ್ಲಿ ಕಂಬ, ತಂತಿ,ಟಿ.ಸಿ. ಹಾಕಿಸಿಕೊಳ್ಳಬೇಕೆಂಬ ಆದೇಶವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಲಾಗುವುದು ಎಂದರು.


ಹಾಗೆಯೇ ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ರೈತರಿಗೆ ಎಕರೆಗೆ ೨೦ ಸಾವಿರ ರೂ. ಸಹಾಯ ಧನ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮನೆ ಇಲ್ಲದವರಿಗೆ ಮನೆ ನೀಡಬೇಕು. ಎಲ್ಲಾ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಪಹಣಿ ಸೇರಿದಂತೆ ವಿವಿಧ ಪ್ರಮಾಣ ಪತ್ರ ಪಡೆಯಲು ಹೆಚ್ಚಿಸಿರುವ ಶುಲ್ಕವನ್ನು ಇಳಿಸಬೇಕು ಎಂದರು.


ರಕ್ತದಾನ ಮಾಡುವವರು, ೯೪೪೯೯೬೮೫೯೯, ೯೯೪೫೫೨೫೪೮೦, ೮೯೭೧೮೬೮೪೦೮ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಸ್.ಶಿವಮೂರ್ತಿ, ಹಿಟ್ಟೂರು ರಾಜ್, ಕಸಟ್ಟಿ ರುದ್ರೇಶ್, ಕೆ.ರಾಘವೇಂದ್ರ, ಪಿ.ಡಿ. ಮಂಜಪ್ಪ, ಗುರುಶಾಂತಪ್ಪ, ಚೇತನ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!