ಶಿವಮೊಗ್ಗ,ಡಿ.೦೧: ಶಿವಮೊಗ್ಗ ನಗರದ ೧೩ನೇ ವಾರ್ಡಿನ ಮೀನಾಕ್ಷಿ ಭವನ್ ಹಿಂಭಾಗದ ಟಿ.ಜಿ.ಎನ್. ಲೇಔಟ್ ಹಿಂಭಾಗದ ಆಶ್ರಮದ ರಸ್ತೆಯಲ್ಲಿರುವ ಭಾಗವಾನ್ ಆಶ್ರಮವನ್ನು ಧ್ವಂಸ ಮಾಡಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಲೆನಾಡು ಕೇಸರಿ ಪಡಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಈ ಭಗವಾನ್ ಆಶ್ರಮವು ಅವುದೂತ ಪರಂಪರೆಗೆ ಸೇರಿದ್ದು, ಲಕ್ಷಾಂತರ ಜನರ ಶ್ರದ್ಧಾ ಕೇಂದ್ರವಾಗಿದೆ. ಅನೇಕ ತಲೆಮಾರುಗಳಿಂದ ಈ ಜಾಗದಲ್ಲಿ ಸತ್ಸಂಗ, ಪೂಜಾ ಪುನಸ್ಕಾರಗಳು ಅನ್ನ ಸಂತರ್ಪಣೆ ಅದರಲ್ಲೂ ವಿಶೇಷವಾಗಿ ದತ್ತ ಜಯಂತಿ ಸಂದರ್ಭದಲ್ಲಿ ಇಡಿ ನಗರ ಮತ್ತು ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಗುರುಬಂಧುಗಳು ಬಂದು ಸೇವೆ ಸಲ್ಲಿಸುತ್ತಿದ್ದಾರೆ.
ಈ ಶ್ರದ್ಧಾ ಕೇಂದ್ರವು ಹಳೆಯ ಹಂಚಿನ ಮತ್ತು ಮಣ್ಣಿನ ಗೋಡೆಯ ಕಟ್ಟಡವಾಗಿದ್ದರಿಂದ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದ ಸಂದರ್ಭದಲ್ಲಿ ಬೀಳುವ ಹಂತದ್ದಲ್ಲಿದ್ದಾಗ, ಆ ಜಾಗದ ಮುಂಭಾಗದಲ್ಲಿ ತಾತ್ಕಲಿಕ ಶೆಡ್‌ನಲ್ಲಿ ಗುರುಗಳ ಪಾದುಕೆಯನ್ನು ಪ್ರತಿಷ್ಠಾಪಿಸಿ ನಿತ್ಯವು ಪೂಜೆ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ನ.೨೧ರಂದು ಕೆಲವು ಭೂ ಮಾಪಿಯ ಪಟ್ಟಭದ್ರ ಹಿತಾಸಕ್ತಿಗಳು
ಏಕಾಏಕಿ ಒಂದು ತಂಡವಾಗಿ ಬಂದು ಗೂಂಡಾವರ್ತನೆಯಿಂದ ಈ ಜಾಗದ ಹಕ್ಕುದಾರಿಕೆ ನಮ್ಮ ಬಳಿ ಇದೆ ಎಂದು ಸುಳ್ಳು ಹೇಳುತ್ತಾ ಜೆಸಿಬಿ ಯಂತ್ರ ಬಳಸಿ ದ್ವಂಸಮಾಡಿರುತ್ತಾರೆ. ನಂತರ ಭಕ್ತರು ಮತ್ತು ಟ್ರಸ್ಟಿಗಳು ಹಾಗೂ ಸ್ಥಳಿಯರು ಈ ಸಂಬಂಧ ಸದರಿ ಕೋಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಭಕ್ತರ ಸಹಾಯದಿಂದ ತಾತ್ಕಲಿಕ ಶೆಡ್‌ನಲ್ಲಿ ದೇವರನ್ನು ಪುನಃ ಪ್ರತಿಷ್ಠಾಪಿಸಿರುತ್ತಾರೆ.
ಈ ವ್ಯಕ್ತಿಗಳು ಈ ಕ್ಷಣದ ವರೆಗೆ ನ್ಯಾಯಲಯದ ಆದೇಶವಾಗಲಿ, ಹಕ್ಕುದಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಠಾಣೆಗೆ ಕೊಟ್ಟಿರುವುದಿಲ್ಲ. ಈಗಲೂ ಸಹ ಭಯದ ವಾತಾವರಣ ನಿರ್ಮಿಸುತ್ತಿದ್ದು, ಇವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಂಡು ರಕ್ಷಣೆಯನ್ನು ಕೊಡಬೇಕಾಗಿ ಮಲೆನಾಡು ಕೇಸರಿ ಪಡೆಯ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ.