ಶಿವಮೊಗ್ಗ: ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಶಿವಮೊಗ್ಗದ ವಕೀಲರ ಸಂಘದ ನೇತೃತ್ವದಲ್ಲಿ ನೂರಾರು ವಕೀಲರ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಕೋರ್ಟ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಾಲರಾಜ ಅರಸ್ ರಸ್ತೆ, ಸೀನಪ್ಪ ಶೆಟ್ಟಿ ವೃತ್ತ, ಅಮೀರ್ ಅಹ್ಮದ್ ವೃತದವರೆಗೆ ಹೋಗಿ ವಾಪಸ್ ಶೀನಪ್ಪ ಶೆಟ್ಟಿ ವೃತ್ತಕ್ಕೆ ಬಂದು ಪ್ರತಿಭಟನಾ ಸಭೆ ನಡೆಸಿದರು. ವಕೀಲರ ಪ್ರತಿಭಟನೆ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಶೀನಪ್ಪ ಶೆಟ್ಟಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರು, ತಮ್ಮ ಮನವಿ ಸ್ವೀಕರಿಸಲು ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳೇ ಬರಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ತಹಶೀಲ್ದಾರ್, ಡಿವೈಎಸ್ಪಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಂದರೂ ಕೂಡ ಅದನ್ನು ಒಪ್ಪದೇ ಜಿಲ್ಲಾಧಿಕಾರಿಗಳೇ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಮಧ್ಯೆ ವಕೀಲರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಜಿಲ್ಲಾ ರಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ವಕೀಲರು ಪ್ರತಿಭಟನೆ ಹಿಂಪಡೆದರು.

ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರಿನಲ್ಲಿ ನಿನ್ನೆ ವಕೀಲರ ಸಂಘದ ಸದಸ್ಯ ಪ್ರೀತಂ ಅವರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಅಲ್ಲಿನ ನಗರದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಪ್ರೀತಂ ಅವರನ್ನು ಠಾಣೆಗೆ ಎಳೆದುಕೊಂಡು ಹೋಗಿ ಲಾಠಿ, ದೊಣ್ಣೆಯಿಂದ ಥಳಿಸಿ, ಶೂ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಇದು ಮಾರಣಾಂತಿಕ ಹಲ್ಲೆಯಾಗಿದೆ. ಕೊಲೆ ಪ್ರಕರಣವನ್ನು ಪೊಲೀಸರ ಮೇಲೆ ದಾಖಲಿಸಬೇಕು. ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಅಮಾನತು ಮಾಡಿದರೆ ಸಾಲದು ತಕ್ಷಣ ಅವರನ್ನು ಬಂಧಿಸಬೇಕು ಎಂದು ವಕೀಲರು ಆಗ್ರಹಿಸಿದರು.

ಹೀಗೆ ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ವಕೀಲರ ರಕ್ಷಣಾ ಕಾಯ್ದೆಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು. ಮತ್ತು ವಕೀಲರ ಮೇಲೆ ಹಲ್ಲೆ ನಡೆಯದಂತೆ ತಡೆಯುವ ಸಂಬಂಧ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷ ಟಿ.ಎಸ್. ಟೇಕೋಜಿರಾವ್, ಗಿರೀಶ್ ಎಸ್., ಮಹೇಂದ್ರಕುಮಾರ್, ಕೆ.ಪಿ, ಶ್ರೀಪಾಲ್, ಮಂಜು, ವೈ.ಬಿ. ಚಂದ್ರಕಾಂತ್, ಅಶೋಕ್, ವಿದ್ಯಾರಾಣಿ ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!