ಎಲ್ಲರಿಗೂ ನಿಮ್ಮ ವಿಶ್ವಾಸ್ ಮಾಡುವ ವಿಶ್ವಾಸ ಪೂರ್ವಕ ನಮಸ್ಕಾರಗಳು.
ನಮ್ಮ ಹೆಮ್ಮೆಯ ಶಿವಮೊಗ್ಗ ಮಹಾ ನಗರ ಪಾಲಿಕೆಯ ಸದಸ್ಯನಾಗಿ ಐದು ವರ್ಷಗಳ ಒಂದು ಸಾರ್ಥಕ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ನನ್ನ ಮನದಾಳದ ಧನ್ಯವಾದಗಳನ್ನು ತಿಳಿಸುತ್ತೇನೆ.
ಕಳೆದ ಐದು ವರ್ಷಗಳು ನನ್ನ ಬದುಕಿನ ಅವಿಸ್ಮರಣೀಯ ದಿನಗಳೆಂದರೆ ತಪ್ಪಾಗಲಾರದು . ಮಹಾನಗರ ಪಾಲಿಕೆ ಸದಸ್ಯನಾಗಿ ಮೊಟ್ಟ ಮೊದಲಬಾರಿಗೆ ಶಿವಮೊಗ್ಗ ನಗರದ 2ನೇ ವಾರ್ಡಿನ ಮಹಾಜನತೆಯ ಆಶೀರ್ವಾದ ಪಡೆದು ಚುನಾಯಿತನಾಗಿ ಕಳೆದ ಐದು ವರ್ಷಗಳಲ್ಲಿ ನನ್ನ ಕ್ಷೇತ್ರದ ಬಡಾವಣೆಗಳ ಅಭಿವೃದ್ಧಿಗೆ ಹಾಗು ನನ್ನ ಕ್ಷೇತ್ರದ ಜನರ ಕುಂದು ಕೊರತೆಗಳನ್ನು ಪರಿಹರಿಸಲು ನಿರಂತರ ಪ್ರಯತ್ನಶೀಲನಾಗಿರುವ ತೃಪ್ತಿ ನನಗಿದೆ .


ಮಹಾನಗರ ಪಾಲಿಕೆಯ ಸದಸ್ಯತ್ವದ ಸ್ಥಾನದ ಗರಿಮೆಯಂತೆ ನಾನು ನಡೆದುಕೊಂಡಿದ್ದೇನೆ . ಶಿವಮೊಗ್ಗ ನಗರದ 35 ವಾರ್ಡುಗಳ ಪೈಕಿ ಅತಿ ದೊಡ್ಡದಾದ 2ನೇ ವಾರ್ಡಿಗೆ ಅತಿ ಹೆಚ್ಚು ಅನುದಾನ ಪಡೆದು ಅತಿ ಹೆಚ್ಚು ಜನಪರ ಕೆಲಸಗಳನ್ನು ಕೈಗೊಂಡ ಅದೃಷ್ಟ ನನ್ನದಾಗಿದೆ.
ಪ್ರತಿ ಮಳೆಗಾಲದ ಸಮಯದಲ್ಲಿ ನನ್ನ ವಾರ್ಡಿನ ಅನೇಕ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಸಮಸ್ಯೆಗಳಿಗೆ ರಾಜಕಾಲುವೆಯನ್ನು ಮತ್ತಷ್ಟು ಆಳ-ಆಗಲವಾಗಿ ನಿರ್ಮಿಸಿ ಶಾಶ್ವತವಾದ ಪರಿಹಾರ ಕಂಡುಕೊಳ್ಳಲಾಗಿದೆ .


ಪೌರ ಕಾರ್ಮಿರಿಗಾಗಿ ಆಶ್ರಯ ಬಡಾವಣೆಯಲ್ಲಿ ಸರ್ಕಾರದ ಗೃಹಭಾಗ್ಯ ಯೋಜನೆಯಡಿ 180 ಮನೆಗಳ ನಿರ್ಮಾಣವಿರಬಹುದು , ಬೊಮ್ಮನ ಕಟ್ಟೆಯ ಬಹೃತ್ ಕೆರೆಯ ಅಭಿವೃದ್ಧಿ ಇರಬಹುದು, ನವಲೆಯ ಸರ್ಕಾರಿ ಶಾಲೆಯ ಪುನರುಜ್ಜೀವನವಿರಬಹುದು ನಾಗರೀಕರ ಹಾಗು ಸರ್ಕಾರದ ನಡುವಿನ ಸೇತುವೆಯಂತೆ ಸಮರ್ಪಕವಾಗಿ ಕೆಲಸ ನಿರ್ವಹಿಸಿದ ಸಮಾಧಾನವಿದೆ .
ಅಶ್ರಯ ಬಡಾವಣೆಯ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಬೀದಿದೀಪಗಳ ವ್ಯವಸ್ಥೆ ಈಗ ಬಹುತೇಕ ಮಟ್ಟಿಗೆ ಸುಧಾರಿಸಿದೆ . ವಿಧ್ಯಾರ್ಥಿಗಳಿಗಾಗಿ ವಸತಿ ಗೃಹ ಹಾಗು ಅಂಗನವಾಡಿಗಳು ನಿರ್ಮಾಣದ ಹಂತದಲ್ಲಿದೆ .


ಎಲ್.ಬಿ.ಎಸ್. ನಗರ, ಅಶ್ವಥ್ ನಗರ , ಕೀರ್ತಿನಗರ, ನವಲೆ ಮುಖ್ಯ ರಸ್ತೆಯಲ್ಲಿ ರಸ್ತೆ, ದಾರಿದೀಪಗಳು ಆ ಭಾಗದ ಜನರ ಪ್ರಶಂಸೆಗೆ ಕಾರಣವಾಗಿದೆ . ವಾರ್ಡಿನಲ್ಲಿ ಬರುವ ಅನೇಕ ದೇವಾಲಯಗಳು ಹೊಸರೂಪದೊಂದಿಗೆ ಕಂಗೊಳಿಸುತ್ತಿವೆ .
ಎಲ್. ಬಿ. ಎಸ್. ನಗರ ಹಾಗು ಅಶ್ವಥ್ ನಗರಕ್ಕೆ ಹೊಂದಿಕೊಂಡಂತೆ ಇರುವ ಸ್ವಾಮಿ ವಿವೇಕಾನಂದ ಪಾರ್ಕ್ ಈಗ ಈ ಭಾಗದ ಮಕ್ಕಳ ಹಾಗು ಹಿರಿಯ ನಾಗರೀಕರ ಅಚ್ಚುಮೆಚ್ಚಿನ ತಾಣವಾಗಿರುವುದು ಹಾಗು ಇಲ್ಲಿಯೇ ಧನ್ವಂತರಿ ಉಧ್ಯಾನವನ ಮತ್ತು ಯೋಗ ಮಂದಿರದ ನಿರ್ಮಾಣ ಅತೀವ ಹರ್ಷ ತಂದ ಸಂಗತಿಗಳು .
ವಿಶ್ವದಾದ್ಯಂತ ಕಾಡಿದ ಕರೋನಾ ಮಹಾಮಾರಿ ನಮ್ಮೆಲ್ಲರ ಕಾರ್ಯಾವಧಿಯ ಸುಮಾರು ಎರಡುವರ್ಷಗಳಷ್ಟು ಸಮಯವನ್ನು ಹಾಳು ಮಾಡಿದರೂ ಸರಿ ಸುಮಾರು 100 ಕೋಟಿಯ ಅನುದಾನದ ಮೊತ್ತದಲ್ಲಿ ನಾನು ಪ್ರತಿನಿಧಿಸಿದ ಎರಡನೇ ವಾರ್ಡಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಒಂದು ಮೈಲಿಗಲ್ಲು.


ಕರೋನಾ ಸಂದರ್ಭದಲ್ಲಿ ಅನೇಕ ಸ್ವಯಂ ಸೇವಕರ ಜೊತೆ ಆಹಾರ ಪದಾರ್ಥಗಳನ್ನು, ಔಷಧಿಗಳನ್ನು ಅವಶ್ಯಕತೆ ಇರುವವರಿಗೆ ತಲುಪಿಸಿದ ಸಾರ್ಥಕತೆ ನನಗಿದೆ .
ನನ್ನ ಮೊದಲನೆ ಅವಧಿಯ ಮಹಾ ನಗರ ಪಾಲಿಕೆಯ ಸದಸ್ಯತ್ವದಲ್ಲಿ ಇಷ್ಟೆಲ್ಲಾ ಕೆಲಸಗಳನ್ನು ಕೈಗೊಳ್ಳಲು ಬೆಂಬಲವಾಗಿ ನಿಂತ ನನ್ನ ಪಕ್ಷದ ಹಿರಿಯ ನಾಯಕರಾದ ಕೆ. ಎಸ್ ಈಶ್ವರಪ್ಪನವರು , ಸಂಸದರಾದ ಬಿ.ವೈ. ರಾಘವೇಂದ್ರರವರು , ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡರು ಹಾಗು ಡಿ.ಎಸ್. ಅರುಣ್ ಅವರು ಹಾಗು ಮಾಜಿ ಸೂಡ ಅಧ್ಯಕ್ಷರಾದ ನಾಗರಾಜ್, ಮಾಜಿ ಸೂಡಾ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಮತ್ತು
ಶಿವಮೊಗ್ಗ ಗ್ರಾಮಾಂತರ ಭಾಗದ ಮಾಜಿ ಶಾಸಕರಾದ ಅಶೋಕ್ ನಾಯಕ ಅವರನ್ನು ಈ ಸಮಯದಲ್ಲಿ ನೆನೆಯಲು ಬಯಸುತ್ತೇನೆ . ಮಹಾನಗರ ಪಾಲಿಕೆಯ ಹಿರಿಯ ಸದಸ್ಯರಾದ ಜ್ಞಾನೇಶ್ವರ್ ಹಾಗು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರ ಸಹಕಾರವನ್ಮು ಇಲ್ಲಿ ಸ್ಮರಿಸಲೇಬೇಕು .


ನಮ್ಮ ಪಕ್ಷದ ಹಿರಿಯರು, ಹಿತೈಷಿಗಳು ಹಾಗು ಅಸಂಖ್ಯಾತ ಕಾರ್ಯಕರ್ತರ ಸಹಕಾರ ಎಂದಿಗೂ ಮರೆಯುವುದಿಲ್ಲ .
ಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಚು ಆಯ್ಕೆ ಮಾಡಿ ಸೇವೆ ಮಾಡಲು ಅವಕಾಶ ಕೊಟ್ಟ ನನ್ಮ ವಾರ್ಡಿನ ಪ್ರತಿ ನಾಗರೀಕರಿಗೂ ಹಾಗು ಮಾಡಿದ ಜನಪರ ಕೆಲಸಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸಿದ ಪತ್ರಿಕಾ ಮಾಧ್ಯಮದ ಎಲ್ಲಾ ಗೆಳೆಯರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ .
ಹಲವು ಬಾರಿ ಹೊಗಳಿ ಬೆನ್ನು ತಟ್ಚಿದ ಮತ್ತು ಕೆಲವು ಸಾರಿ ಟೀಕಿಸಿ, ತಿದ್ದಿ ತೀಡಿದ ಅನೇಕ ಗುರುಸ್ವರೂಪಿ ವ್ಯಕ್ತಿಗಳಿಗೆ ನನ್ನ ನಮಸ್ಕಾರಗಳು.
. “The best way to find vourself is to loose yourself” – Mahatma Gandhi

ಇಂತಿ ನಿಮ್ಮ ಪ್ರೀತಿಯ.

ಇ. ವಿಶ್ವಾಸ್
ನಿಕಟಪೂರ್ವ ಮಹಾನಗರ ಪಾಲಿಕೆ ಸದಸ್ಯರು, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

error: Content is protected !!