ಶಿವಮೊಗ್ಗ: ಜಾತಿ ಗಣತಿಯ ಸಂಘರ್ಷ ಹಾಗೂ ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.


ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಗಣತಿಗೆ ಸಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಮುಖ್ಯಮಂತ್ರಿಗಳು ೭ ವರ್ಷದ ಹಿಂದೆಯೇ ವರದಿಯನ್ನು ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ವರದಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ನಾಯಕರಲ್ಲಿಯೇ ಗೊಂದಲವಿದೆ. ಮುಖ್ಯಮಂತ್ರಿಗಳು ಒಂದು ಹೇಳಿಕೆ ನೀಡಿದರೆ ಗೃಹ ಸಚಿವ ಪರಮೇಶ್ವರ್ ಮತ್ತೊಂದು ಹೇಳಿಕೆ ನೀಡುತ್ತಾರೆ. ಇದರ ಮಧ್ಯೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನನಗೆ ಗೊತ್ತೇ ಇಲ್ಲ ಎಂದು ಹೇಳುತ್ತಾರೆ ಎಂದರು.


ವರದಿಯ ಮೂಲಪ್ರತಿ ಕಳೆದುಹೋಗಿದೆ ಎಂದು ಕೆಲವರು, ಕಳೆದಿಲ್ಲ ಎಂದು ಕೆಲವರು, ಕಳೆದರೂ ಏನೂ ತೊಂದರೆ ಇಲ್ಲ ಎಂದು ಮತ್ತೆ ಕೆಲವರು . ಹೀಗೆ ತಮಗೆ ಬೇಕಾದಂತೆ ಹೇಳಿಕೆ ನೀಡುತ್ತಿದ್ದಾರೆ.ಎಲ್ಲಾ ಜಾತಿಗಳ ಮಧ್ಯೆ ಸಂಘರ್ಷ ತಂದಿಟ್ಟಿದ್ದಾರೆ. ಇದಕ್ಕೆಲ್ಲಾ ಮುಖ್ಯಮಂತ್ರಿಗಳೇ ಕಾರಣ. ವರದಿ ಬಿಡುಗಡೆ ಆಗುವವರೆಗೂ ಜಯಪ್ರಕಾಶ್ ಅವರನ್ನು ಕೆಳಗಿಳಿಸಲ್ಲ ಎಂದಿದ್ದಾರೆ. ಹೀಗೆ ಗೊಂದಲದ ಗೂಡಾಗಿದೆ. ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.


ಕಳ್ಳ ಕಳ್ಳನೇ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದ ಈಶ್ವರಪ್ಪನವರು ಕಳ್ಳ ಎಂದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಳ್ಳ ಕಳ್ಳನೇ. ಒಂದಲ್ಲ ಒಂದು ದಿನ ಅವರು ಜೈಲಿಗೆ ಹೋಗಬೇಕಾಗುತ್ತದೆ. ಇದು ಗೊತ್ತಿದ್ದೂ ಕೂಡ ಸಚಿವ ಸಂಪುಟ ಸಭೆ ಡಿಕೆಶಿಯವರ ಸಿಬಿಐ ಕೇಸನ್ನು ವಾಪಾಸು ತೆಗೆದುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಸಿಬಿಐ ತನಿಖೆ ಅಂತಿಮ ಹಂತದಲ್ಲಿ ಇರುವಾಗ ಸಂವಿಧಾನ ತಜ್ಞ ಎನಿಸಿಕೊಂಡಿರುವ ಹಾಗೂ ಹಿಂದುಳಿದ ನಾಯಕ ಎಂದು

ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು ಈ ಬಗ್ಗೆ ಯೋಚಿಸಬೇಕು. ಬಿಜೆಪಿ ಶಾಸಕಾಂಗ ಸಭೆ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ನೀಡುವುದರ ಬಗ್ಗೆ ಯೋಚಿಸುತ್ತದೆ ಎಂದರು.
ಐದು ವರ್ಷದ ಹಿಂದೆ ಡಿ.ಕೆ.ಶಿವಕುಮಾರ್ ಅವರ ವರಮಾನ ೨೩ ಕೋಟಿ ಇತ್ತು. ಆದರೆ ಈಗ ೧೬೩ ಕೋಟಿ ದಾಟಿದೆ. ಇದು ಹೇಗೆ ಸಾಧ್ಯ. ಅವರ ಈ ಆದಾಯ ಇಡೀ ದೇಶಕ್ಕೆ ಗೊತ್ತು. ಬಹುಮತ ಇದೆ ಎಂದ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದು ಎಂಬ ಹುಂಬತನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸರ್ಕಾರ ಲೂಟಿಕೋರರಿಗೆ, ಕೊಲೆಗಡುಕರಿಗೆ, ಗೂಂಡಾಗಳಿಗೆ ರಕ್ಷಣೆ ಕೊಡುತ್ತಿದೆ ಎಂದರು.
ಡಿ.ಕೆ. ಶಿವಕುಮಾರ್ ಅವರು ರಾಜೀನಾಮೆ ನೀಡಬೇಕು. ನ್ಯಾಯಾಲಯದಿಂದ ನಿರ್ದೋಷಿ ಎಂದು ಸಾಬೀತಾದರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ ಯಾರು ಬೇಡ ಎನ್ನುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕೆ.ವಿ. ಅಣ್ಣಪ್ಪ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!