ಶಿವಮೊಗ್ಗ: ರಾಜ್ಯ ಸರ್ಕಾರದ ಬರ ನಿರ್ವಹಣೆಯಲ್ಲಿ ವಿಫಲ ಹಾಗೂ ವೈಫಲ್ಯಗಳನ್ನು ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಇಂದು ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಯ ಕೊರತೆಯಿಂದಾಗಿ ತೀವ್ರ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಒಟ್ಟು ೨೩೬ ತಾಲೂಕುಗಳ ಪೈಕಿ ೨೧೬ ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ೭ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ತೀವ್ರ ಕ್ಷಾಮದಿಂದಾಗಿ, ಜಿಲ್ಲೆಯಲ್ಲಿ ಮೆಕ್ಕೆಜೋಳ, ರಾಗಿ, ಜೋಳ, ಭತ್ತದ ಬೆಳೆ ಸಂಪೂರ್ಣ ನಾಶವಾಗಿ ರೈತರ ಆಕ್ರಂದನ ಮುಗಿಲು ಮಟ್ಟಿದೆ. ಹಾಗೂ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ.


ದನ, ಕರು, ಜಾನುವಾರಗಳು ನೀರು ಹಾಗೂ ಮೇವಿನ ಕೊರತೆಯಿಂದಾಗಿ ಸಾವು-ಬದುಕಿನ ಹೋರಾಟದಲ್ಲಿ ನರಳುತ್ತಿವೆ. ಸಾಲ-ಸೋಲ ಮಾಡಿ ಬಿತ್ತಿದ ಬೆಳೆಗಳು ನಾಶವಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಲಿ ಕಾರ್ಮಿಕರು ಬದುಕಿಗಾಗಿ ಬೇರೆ ಪ್ರದೇಶಗಳಿಗೆ ಗುಳೇ ಹೋಗುವ ಪರಿಸ್ಥಿತಿ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳ ತಂಡ ಬರಪೀಡಿತ ಪ್ರದೇಶಗಳಲ್ಲಿ ನಷ್ಟದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದ್ದರೂ ಸಹ ಇದುವರೆಗೆ ಬರ ಪರಿಹಾರದ ಹಣ ಬಿಡುಗಡೆಯಾಗಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.


ರೈತರಿಗೆ ಕನಿಷ್ಟ ೭ ಗಂಟೆ ವಿದ್ಯುತ್ ಒದಗಿಸಬೇಕು. ಬೆಳೆ ನಾಶಕ್ಕೆ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಕುಡಿಯುವ ನೀರಿನ ಬವಣೆ ನೀಗಿಸಲು ಕೊಳವೆ ಬಾವಿ ತೋಡಿಸಲು ಅನುದಾನ ಬಿಡುಗಡೆ ಮಾಡಬೇಕು. ಹಾಗೂ ತಕ್ಷಣ ಟ್ಯಾಂಕರ್‌ಗಳ ಮೂಲಕ ನೀರನ್ನು ನಿರಂತರವಾಗಿ ಸರಬರಾಜು ಮಾಡಬೇಕು. ಬೆಳೆ ವಿಮೆ ಪರಿಹಾರದ ಹಣವನ್ನು ಕೂಡಲೇ ರೈತರಿಗೆ ನೀಡಬೇಕು. ರೈತರ ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-೫ನಲ್ಲಿ ಮೀಟರ್ ಅಳವಡಿಸಿ ಪ್ರತ್ಯೇಕವಾಗಿ ವಿದ್ಯುತ್ ದರ ಹೆಚ್ಚಿಸಿರುವುದು

ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೇ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಕೈಗಾರಿಕೆಗಳಿಗೆ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಇನ್ನಿತರ ಸೌಲಭ್ಯ ಪಡೆಯಲು ರೋಗಿಗಳು ಪರದಾಡುತ್ತಿದ್ದು ಮಿತಿ ಮೀರಿದ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದಗಿ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಈ ಬಗ್ಗೆಯೂ ಸಹ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ರೈತರು ದಂಗೆ ಏಳುವ ಮುನ್ನವೇ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಮಾಢುವ ಮೂಲಕ ಜನರ ನೆಮ್ಮದಿ ಬದುಕಿಗೆ ಅವಕಾಶ ನೀಡಬೇಕಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಮುಖಂಡರು ಮಾತನಾಡಿ, ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಶಾಸಕಿ ಶಾರದಾಪೂರ‍್ಯಾ ನಾಯ್ಕ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಕ್ಷದ ಮುಖಂಡರಾದ ಶಾರದಮ್ಮ ಎಂ.ಜೆ. ಅಪ್ಪಾಜಿ. ನಗರಾಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ಸಂತೋಷ್ ಎಂ.ಎಸ್, ಎಸ್.ಪಿ. ಶಿವಣ್ಣ, ಗೋವಿಂದಪ್ಪ, ಕೆ.ಎನ್. ರಾಮಕೃಷ್ಣ, ನರಸಿಂಹ ಗಂಧದಮನೆ, ತ್ಯಾಗರಾಜ್, ಅಬ್ದುಲ್ ವಾಜೀದ್, ರಾಚಪ್ಪ, ಗೀತಾ ಸತೀಶ್, ಎಸ್.ವಿ. ರಾಜಮ್ಮ, ಕಾಂತರಾಜ್, ಚಾಬೂ ಸಾಬ್, ಹೆಚ್.ಎಂ. ಸಂಗಯ್ಯ, ಸಿದ್ದಪ್ಪ, ರಘು, ಬೊಮ್ಮನಕಟ್ಟೆ ಮಂಜುನಾಥ್, ವಿನಯ್, ನಾಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!