ಶಿವಮೊಗ್ಗ: ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಜಿಲ್ಲಾ ಜೆಡಿಎಸ್ ವತಿಯಿಂದ ನ.೨೨ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ತಿಳಿಸಿದರು
.
ಅವರು ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಬರ ಪರಿಹಾರ ನೀಡದೆ ರೈತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಹಿಂದೆ ೩೦ಸಾವಿರ ರೂ.ನಲ್ಲಿ ರೈತರು ಟಿಸಿ, ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಬಹುದಾಗಿತ್ತು. ಆದರೆ ಸರ್ಕಾರ ಹೊರಡಿಸಿರುವ ಆದೇಶದಿಂದ ಸಂಪರ್ಕ ಪಡೆಯಲು ೩ರಿಂದ ನಾಲ್ಕು ಲಕ್ಷ ರೂ. ಖರ್ಚಾಗಲಿದೆ ಎಂದು ಆರೋಪಿಸಿದರು.
ಸೋಲಾರ್ ಎನರ್ಜಿ ಬೆಂಬಲಿಸಲು ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಹಿಂದೆ ನಗರದ ಪಾರ್ಕ್ಗಳಲ್ಲಿ ಸೋಲಾರ್ ಅಳವಡಿಸಲು ಸರ್ಕಾರ ಮುಂದಾಗಿತ್ತು. ಆದರೆ ಯಶಸ್ವಿಯಾಗಲಿಲ್ಲ. ಈಗ ರೈತರ ಮೇಲೆ ಪ್ರಯೋಗ ಮಾಡಲು ಹೊರಟಿದೆ ಎಂದ ಅವರು ಬರಗಾಲದಲ್ಲಿ ಬರೆ ಎಳೆದಂತಾಗಿದೆ ಎಂದರು.
ರೈತರಿಗೆ ೭ ಗಂಟೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದಿದ್ದ ಸರ್ಕಾರ ಕೇವಲ ನಾಲ್ಕು ಗಂಟೆ ಮಾತ್ರ ನೀಡುತ್ತಿದೆ. ಕೈಗಾರಿಕೆಗಳಿಗೂ ವಿದ್ಯುತ್ ಕೊರತೆ ಉಂಟಾಗಿದೆ. ಬರ ಒಂದು ಕಡೆ, ಭಾಗ್ಯ ಒಂದು ಕಡೆಯಾದರೆ, ಗ್ಯಾರಂಟಿ ಯೋಜನೆ ಜಾರಿಗೆ ಸರ್ಕಾರ ಜನರಿಗೆ ದಂಡದ ರೂಪದಲ್ಲಿ ಹಣ ಸಂಗ್ರಹಣೆಗೆ ಮುಂದಾಗಿದೆ. ಸಂಚಾರಿ ವ್ಯವಸ್ಥೆಯ ಮೂಲಕ ಹಗಲು ದರೋಡೆಯಾಗುತ್ತಿದೆ. ೫೦೦ರೂ. ದಂಡ ಈಗ ೩ಸಾವಿರದಿಂದ ೫ಸಾವಿರದವರೆಗೆ ಏರಿಕೆಯಾಗಿದೆ. ಅಬಕಾರಿ ಇಲಾಖೆ ಸಹ ಮದ್ಯದ ಮೇಲಿನ ದರ ಹೆಚ್ಚಿಸಿದೆ. ಇವೆಲ್ಲವೂ ಭಾಗ್ಯಕ್ಕೆ ವ್ಯಯವಾಗುತ್ತಿದೆ. ಬಲಗೈಲಿ ಕೊಟ್ಟ ಸರ್ಕಾರ ಎಡಗೈನಲ್ಲಿ ಕಿತ್ತುಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳು ಇನ್ನೂ ಸಮರ್ಪಕವಾಗಿ ಜಾರಿ ಆಗಿಲ್ಲ ಎಂದರು.
ಆರೋಗ್ಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷಿಸುತ್ತಿದೆ. ಸ್ವಚ್ಛತೆ ಇಲ್ಲದೆ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಇವೆಲ್ಲವನ್ನೂ ಸರ್ಕಾರದ ಗಮನಕ್ಕೆ ತರಲು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಪ್ರತಿಭಟನಾ ಮೆರವಣಿಗೆ ನಡೆದ ನಂತರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ ಅವರ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಜೆಡಿಎಸ್ನ ನೂತನ ಅಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ,ನ.೨೭ರ ಬೆಳಿಗ್ಗೆ ೧೧ ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ಅಧಿಕೃತವಾಗಿ ಅಧಿಕಾರಿ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮುಖಂಡರಾದ ಭೋಜೇಗೌಡ, ವೈ.ಎಸ್.ವಿ ದತ್ತಾ, ಶಾರದಾ ಪೂರ್ಯಾ ನಾಯ್ಕ ಸೇರಿದಂತೆ ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಪಕ್ಷದ ಗ್ರಾಮಾಂತರ ಅಧ್ಯಕ್ಷ ಸತೀಶ್ ಮಾತನಾಡಿ, ಶಾಸಕಿ ಶಾರದಾ ಪೂರ್ಯಾನಾಯ್ಕ ಹುಟ್ಟುಹಬ್ಬದಂದು ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ವೃತ್ತದಲ್ಲಿ ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭ ಮತ್ತು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗೋವಿಂದಪ್ಪ, ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಕೆ.ಎನ್. ರಾಮಕೃಷ್ಣ, ತ್ಯಾಗರಾಜ್, ಗೀತಾ ಸತೀಶ್, ಹೆಚ್.ಎಂ. ಸಂಗಯ್ಯ, ಬೊಮ್ಮನಕಟ್ಟೆ ಮಂಜುನಾಥ್, ಸಿದ್ದಪ್ಪ, ನಾಗೇಶ್, ಶ್ಯಾಮ್, ನರಸಿಂಹ ಗಂಧದ ಮನೆ, ಅಲ್ತಾಫ್, ಕಿಟ್ಟಣ್ಣ, ಸತೀಶ್, ವಿನಯ್ ಇನ್ನಿತರರು ಉಪಸ್ಥಿತರಿದ್ದರು.