ಶಿವಮೊಗ್ಗ, ನ.೦೧:
ನೀವು ಯಾವುದೇ ಭಾಷೆಯನ್ನಾದರೂ ಕಲಿಯಿರಿ ಅದರಿಂದ ನಿಮಗೆ ಒಳಿತಾಗುತ್ತದೆ. ಹಾಗೆಯೇ ನಿಮ್ಮ ಮನೆ ಹಾಗೂ ನಿಮ್ಮ ಸಮಾಜದ ನಡುವೆ ಕನ್ನಡವನ್ನು ಮರೆಯದೇ ಬಳಸಿ. ನಮ್ಮ ಭಾಷೆಯನ್ನು ಪ್ರೀತಿಸಿ ಗೌರವಿಸುವ ಮೂಲಕ ಅನ್ಯ ಭಾಷೆಗಳನ್ನು ಕಲಿಯಿರಿ ಎಂದು ಹಿರಿಯ ಸಾಹಿತಿ, ನಿವೃತ್ತ ಗ್ರಂಥಪಾಲಕ ಚಂದ್ರೇಗೌಡ ಹೇಳಿದರು.
ಅವರು ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಇಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಶಾಲೆಯ ಧ್ಯೇಯದಂತೆ ನಮ್ಮ ತಂದೆ-ತಾಯಿಯರನ್ನು ಹಾಗೂ ಗುರುಗಳನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ನಡುವೆ ಇರುವ ಪರಿಸರ ಹಾಗೂ ಪ್ರಕೃತಿ ಹಾಳಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮದಾಗಿದೆ ಎಂದ ಅವರು ನಾಳಿನ ಸುಂದರ ದಿನಕ್ಕೆ ಇಂದು ಪರಿಸರವನ್ನು ರಕ್ಷಿಸುವ ಜೊತೆಗೆ ಕಾಡನ್ನು ಉಳಿಸುವ, ಬೆಳೆಸುವ ಅಗತ್ಯವನ್ನು ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ವಹಿಸಿದ್ದು, ಮುಖ್ಯ ಶಿಕ್ಷಕರಾದ ಎಸ್.ಇ. ತೀರ್ಥೇಶ್, ಗಜೇಂದ್ರನಾಥ್, ವಾಣಿಶ್ರೀ, ಶೈಲಜಾ, ರಮೇಶ್ ಕೆ.ಎಂ ಹಾಗೂ ಇತರರಿದ್ದರು.