ಶಿವಮೊಗ್ಗ: ಈ ಬಾರಿಯ ದಸರಾ ಮಹೋತ್ಸವ ಹತ್ತು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಇದಕ್ಕಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಮೇಯರ್ ಎಸ್. ಶಿವಕುಮಾರ್ ಹೇಳಿದರು.


ಅವರು ಇಂದು ಪಾಲಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯಿಂದ ಆಯೋಜಿಸಿದ್ದ ದಸರಾ ಮಹೋತ್ಸವ ಯಶಸ್ಸು ಕಂಡಿದೆ. ವಿವಿಧ ಸಮಿತಿಗಳ ಮೂಲಕ ೧೦ ದಿನಗಳ ಕಾಲವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು

. ಸ್ಥಳೀಯ ಕಲಾವಿದರಲ್ಲದೆ ರಾಜ್ಯದ ವಿವಿಧೆಡೆಯ ಕಲಾವಿದರು ಭಾಗವಹಿಸಿದ್ದರು. ಶಾಸಕರು, ಸಂಸದರು, ಜನಪ್ರತಿನಿಧಿಗಳು ಅತ್ಯಂತ ಸಹಕಾರ ನೀಡಿದರು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬಕ್ಕೆ ಮೆರಗು ನೀಡಿದವು. ಸಂಘ-ಸಂಸ್ಥೆಗಳು ಭಾಗವಹಿಸಿದ್ದವು. ಅಧಿಕಾರಿ ವರ್ಗದವರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದರು. ಕೊನೆಯ ದಿನದ ಕಾರ್ಯಕ್ರಮವಂತೂ ಅತ್ಯಂತ ಯಶಸ್ವಿಯಾಯಿತು. ಸುಮಾರು ಒಂದೂವರೆ ಲಕ್ಷ ಜನ ಫ್ರೀಡಂ ಪಾರ್ಕ್‌ನಲ್ಲಿ ನೆರೆದಿದ್ದು ವಿಶೇಷವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದೆ ದಸರಾ ಸುಸೂತ್ರವಾಗಿ ನೆರವೇರಿತು ಎಂದರು.


ವಿಶೇಷವಾಗಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸದಸ್ಯರು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸಿದ್ದರು ಹೆಸರಾಂತ ಕಲಾತಂಡಗಳು ಜನರನ್ನು ರಂಜಿಸಿದರು. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮ ನಡೆಯಿತು. ಸರ್ಕಾರದಿಂದ ೨೦ಲಕ್ಷ ರೂ. ಅನುದಾನ ಬಂದಿದೆ. ಮತ್ತಷ್ಟು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಿಗಬಹುದು ಎಂಬ ನಿರೀಕ್ಷೆಯಲ್ಲಿ ನಾವೆಲ್ಲ ಇದ್ದೇವೆ ಎಂದರು.


ಈ ಮಧ್ಯೆ ನೇತ್ರಾವತಿ ಎಂಬ ಆನೆ ಮರಿಹಾಕಿದ್ದು ಕೂಡ ವಿಶೇಷವೇ. ಈ ಬಗ್ಗೆ ಒಂದಿಷ್ಟು ಗೊಂದಲಗಳಿರುವುದು ನಿಜ. ಗರ್ಭಿಣಿ ಆನೆಯನ್ನು ಮೆರವಣಿಗೆಗೆ ಹೇಗೆ ಕರೆದುಕೊಂಡು ಬಂದರು ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಬಂದಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳೇ

ಉತ್ತರಿಸಬೇಕಾಗಿದೆ ಎಂದ ಅವರು, ಮರಿಯಾನೆಗೆ ಚಾಮುಂಡಿ ಎಂದು ಹೆಸರಿಡಲು ಪಾಲಿಕೆಯಿಂದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಲಕ್ಷ್ಮಿ ಶಂಕರ್ ನಾಯಕ್, ಸದಸ್ಯರಾದ ರೇಖಾ ರಂಗನಾಥ್, ಅನಿತಾ ರವಿಶಂಕರ್, ಆಶಾ ಚಂದ್ರಪ್ಪ, ಆರತಿ ಆ.ಮಾ.ಪ್ರಕಾಶ್, ವಿಶ್ವನಾಥ್, ಇ. ವಿಶ್ವಾಸ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!