ಹೊಸನಗರ : ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ಹಸ್ತ ಮಳೆಯ ಆರ್ಭಟ ಮುಂದುವರೆದಿದ್ದು ಭಾನುವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಸಾವೇಹಕ್ಲಿನಲ್ಲಿ ಅತಿಹೆಚ್ಚು 144 ಮಿ.ಮೀ. ಮಳೆ ದಾಖಲಾಗಿದೆ.
ಉಳಿದಂತೆ ಹುಲಿಕಲ್ 122, ಮಾಸ್ತಿಕಟ್ಟೆ 110, ಚಕ್ರಾನಗರ 104, ಬಿದನೂರು ನಗರ 94, ಯಡೂರು 71, ಮಾಣಿ 70, ಸೊನಲೆ 66, ಸಂಪೆಕಟ್ಟೆ 59.5, ತ್ರಿಣಿವೆ 52, ಹೊಸನಗರ 42, ಮೇಲಿನಬೆಸಿಗೆ 39.5, ಮುಂಬಾರು 36.5 ಮತ್ತು ಕೋಡೂರು 31.5 ಮಿಲಿ ಮೀಟರ್ ಮಳೆ ದಾಖಲಾಗಿದೆ.
1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇಂದು ಬೆಳಗ್ಗೆ 8:00 ಗಂಟೆಗೆ 1787.95 ಅಡಿ ತಲುಪಿದ್ದು ಜಲಾಶಯಕ್ಕೆ 11738 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ತಾಲೂಕಿನಾದ್ಯಂತ ಶೀತಮಯ ವಾತಾವರಣ ಉಂಟಾಗಿದೆ. ವಿದ್ಯುತ್ ಸಹ ಕಣ್ಣಾಮುಚ್ಚಾಲೆ ಆಡುತ್ತಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.