ಶಿವಮೊಗ್ಗ: ತೆಂಗು ಬೆಳೆ ಸೇರಿದಂತೆ ಬೆಳೆಗಾರರ ಸiಸ್ಯೆ ಬಗೆಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಂಸದ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿದೆ. ತೆಂಗಿನ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೊಬ್ಬರಿಗೆ ಪ್ರತಿ ಕ್ವಿಂಟಾಲಿಗೆ ೨೦ ಸಾವಿರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.
ಎಳನೀರು iತ್ತು ತೆಂಗಿನ ಕಾಯಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಪ್ರಮಾಣ ಮಿತಿ ಹೇರದೆ ತೆಂಗಿನ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿಸಬೇಕು. ಮುಕ್ತ ಮಾರುಕಟ್ಟೆಯಲ್ಲಿ ತೆಂಗಿನ ಉತ್ಪನ್ನ ಮತ್ತು ಖಾದ್ಯ ತೈಲ ಆಮದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು..
ಕೇಂದ್ರ ಸರ್ಕಾರದ ಎಣ್ಣೆ ಉಪಯೋಗಿಸುವ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ತೆಂಗಿನ ಎಣ್ಣೆಯನ್ನು ಉಪಯೋಗಿಸಬೇಕು. ಖರೀದಿ ಕೇಂದ್ರಗಳು ವರ್ಷವಿಡೀ ಇರಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ರಾಘವೇಂದ್ರ, ಹಿಟ್ಟೂರು ರಾಜು, ಎಸ್. ಶಿವಮೂರ್ತಿ, ಪಿ.ಡಿ. ಮಂಜಪ್ಪ, ಕೆ. ರುದ್ರೇಶ್, ಸಿ. ಚಂದ್ರಪ್ಪ, ಜಿ.ಎನ್. ಪಂಚಾಕ್ಷರಿ ಸೇರಿದಂತೆ ಹಲವರಿದ್ದರು.