ಸಾಗರ : ಮಡಸೂರು ಗ್ರಾಮದ ರೈತರನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಹರತಾಳು ಹಾಲಪ್ಪ ಶಕುನಿ ಆಟ ಆಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ರೈತರಿಗೆ ಕನಿಷ್ಟ ಸೌಲಭ್ಯ ನೀಡಿಲ್ಲ. ಬೇಳೂರು ವಿರುದ್ದ ಹೀನಾಯವಾಗಿ ಸೋತು ಈಗ ಹೊಟ್ಟೆ ಉರಿ ತಾಳಿಕೊಳ್ಳಲಾರದೆ ಕಾಗೋಡು, ಬೇಳೂರು ವಿರುದ್ದ ಅಪಪ್ರಚಾರಕ್ಕೆ ಇಳಿದಿರುವುದು ಖಂಡನೀಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ತಿಳಿಸಿದ್ದಾರೆ.


ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಡಸೂರು ಗ್ರಾಮದ ಸರ್ವೇ ನಂ. ೭೧ರ ಏಳು ಜನ ರೈತರು ಜೈಲಿಗೆ ಹೋಗಿರುವುದಕ್ಕೂ, ಕಾಂಗ್ರೇಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.


ಹಿಂದೆ ಹಾಲಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಮಡಸೂರು ರೈತರು ಸಾಗುವಳಿ ಪತ್ರ ಕೊಡಿಸಿ ಎಂದು ಬಂದಿದ್ದರು. ಆಗ ಹಾಲಪ್ಪನವರು ಬಂದ ರೈತರು ಗೋಪಾಲಕೃಷ್ಣ ಬೇಳೂರು ಕಡೆಯವರು ಎಂದು ಬೈದು ಕಳಿಸಿರುವ ಜೊತೆಗೆ ಕೆಲವು ರೈತರ ಮೇಲೆ ಎಫ್‌ಐಆರ್ ಸಹ ಹಾಕಿಸಿದ್ದರು. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನೀವು ನಮ್ಮನ್ನು ಬೆಂಬಲಿಸಿದರೆ ಸಾಗುವಳಿ ಪತ್ರ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಮಾಜಿ ಶಾಸಕ ಹಾಲಪ್ಪ ಹರತಾಳು ಕ್ಷೇತ್ರವ್ಯಾಪ್ತಿಯಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ರೈತರು ಕಾಡು ಕಡಿಯಲು ಅಧಿಕಾರಿಗಳನ್ನು ಬೈಯಲು ಪರೋಕ್ಷವಾಗಿ ಹಾಲಪ್ಪ ಹರತಾಳು ಕಾರಣ ಎಂದು ದೂರಿದರು.


ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಮಡಸೂರು ಗ್ರಾಮದ ೯ ಕುಟುಂಬಗಳಿಗೆ ೧೯೭೪ರಲ್ಲಿ ಕಾಗೋಡು ತಿಮ್ಮಪ್ಪ ಅವರು ದರಕಾಸ್ತು ಅಡಿ ಭೂಮಿ ಮಂಜೂರು ಮಾಡಿದ್ದರು. ಈ ಪೈಕಿ ಏಳು ಜನರು ಸಾಗುವಳಿಪತ್ರ ಪಡೆದಿರಲಿಲ್ಲ. ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಬೇಳೂರು ರೈತರಿಗೆ ಭೂಮಿ ಕೊಡುವ ಕೆಲಸ ಮಾಡಿದ್ದಾರೆಯೆ ವಿನಃ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ.

ಆದರೆ ಹಾಲಪ್ಪ ಶಾಸಕರಾಗಿದ್ದಾಗ ಒಬ್ಬ ರೈತನಿಗೂ ಭೂಹಕ್ಕು ಕೊಟ್ಟಿಲ್ಲ. ಹಾಲಪ್ಪ ಹರತಾಳು ಹಿರಳೇ ಗ್ರಾಮದ ೧೫ ಜನ ರೈತರಿಗೆ ಸಾಮಾಜಿಕ ನ್ಯಾಯವನ್ನು ಪರಿಗಣಿಸದೆ ಹಕ್ಕುಪತ್ರ ವಜಾ ಮಾಡಿದ್ದರು. ನಂತರ ಕಾಗೋಡು ತಿಮ್ಮಪ್ಪ ಅವರ ಮಧ್ಯಪ್ರವೇಶ ಮಾಡಿ ರೈತರ ಜಮೀನು ಉಳಿಸಿ ಕೊಟ್ಟಿದ್ದರು. ಮಡಸೂರು ಪ್ರಕರಣದಲ್ಲಿ ಸಹ ಕಾಗೋಡು ತಿಮ್ಮಪ್ಪ ಅವರ ಯಾವುದೇ ಪಾತ್ರವಿಲ್ಲ. ಆದರೆ ಪ್ರಕರಣದಲ್ಲಿ ತಹಶೀಲ್ದಾರ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಜೈಲಿಗೆ ಹೋಗಿರುವ ರೈತರಿಗೆ ನ್ಯಾಯ ಕೊಡಿಸಲು ಕಾಂಗ್ರೇಸ್ ಪಕ್ಷ ಬದ್ದವಾಗಿದೆ ಎಂದರು.


ಗೋಷ್ಟಿಯಲ್ಲಿ ಸೋಮಶೇಖರ ಲ್ಯಾವಿಗೆರೆ, ಸುರೇಶಬಾಬು, ಮಕ್ಬೂಲ್ ಅಹ್ಮದ್, ಗಣಪತಿ ಮಂಡಗಳಲೆ, ಮಹಾಬಲ ಕೌತಿ, ಆನಂದ್ ಭೀಮನೇರಿ, ಮೈಕೆಲ್ ಡಿಸೋಜ, ಡಿ. ದಿನೇಶ್, ಹಾಲಾ ನಾಯ್ಕ ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!