ಹೊಸನಗರ : ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡಲ್ಲಿ ನಾವು ಒಳ್ಳೆಯವರು ಎನಿಸಿಕೊಳ್ಳುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇತರರ ಮನಪರಿವರ್ತನೆ ಮಾಡುವ ಮೂಲಕ ಅವರನ್ನು ಸಹಾ ಸರಿಪಡಿಸಿದಲ್ಲಿ ಪ್ರಪಂಚಕ್ಕೆ ಒಂದು ಉತ್ತಮ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ಹೇಳಿದರು.

ಇಲ್ಲಿನ ಈಡಿಗರ ಸಭಾಭವನದಲ್ಲಿ ಬುಧವಾರ ತಾಲೂಕು ಕಾರ‍್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,‌ ಸಮಕಾಲೀನ ಪತ್ರಿಕಾ ಮಾಧ್ಯಮದ ಜವಾಬ್ದಾರಿಗಳು ಸಾಕಷ್ಟಿವೆ. ವಸ್ತು ಸ್ಥಿತಿಯನ್ನು ಜನಸಾಮಾನ್ಯರ ಎದುರು ತೆರೆದಿಡುವ ಕಾರ‍್ಯ ಪತ್ರಕರ್ತರಿಂದ ಆಗಬೇಕು. ಭಾರತ ಬಹುತ್ವದಲ್ಲಿ ಏಕತೆ ಹೊಂದಿದೆ. ಸಂಘರ್ಷಕ್ಕೆ ಎಡೆಮಾಡಿಕೊಡುವಂತಹ ಸುದ್ದಿಗಳ ವೈಭವೀಕರಣದ ಅಗತ್ಯವಿಲ್ಲ. ಹಿಂಸೆಯಿಂದ ಯಾವ ಸಮಸ್ಯೆಯೂ ಇದುವರೆಗೆ ಬಗೆಹರಿದಿಲ್ಲ ಎನ್ನುವುದು ಉಲ್ಲೇಖನೀಯ ಎಂದರು.

ಪತ್ರಕರ್ತರು ಸಾಹಿತ್ಯವನ್ನು ಚೆನ್ನಾಗಿ ಓದಬೇಕು. ಅಧ್ಯಯನಶೀಲ ಪತ್ರಕರ್ತರಿಂದ ಉತ್ತಮ ಪತ್ರಿಕೋದ್ಯಮ ಸಾಧ್ಯ. ಇಂದು ವ್ಯಸನ ಮುಕ್ತ ಸಮಾಜಕ್ಕೆ ನಿರ್ಮಾಣ ಮಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲೆಯಾದ್ಯಂತ ಅಭಿಯಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಯುವಜನರು ಮತ್ತು ವಿದ್ಯಾರ್ಥಿಗಳು ಮೊಬೈಲ್ ಎಂಬ ಹೊಸ ವ್ಯಸನ ಅಂಟಿಸಿಕೊಂಡಿದ್ದಾರೆ. ಸಮಾಜದಲ್ಲಿನ ಪಿಡುಗುಗಳನ್ನು ತೊಡೆದುಹಾಕುವಲ್ಲಿ ಪತ್ರಕರ್ತರ ಪಾತ್ರ ಮಹತ್ವವಾದುದು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ವಯೋಸಹಜವಾಗಿ ಹದಿವಯಸ್ಸಿನಲ್ಲಿ ಮನಸ್ಸು ಹತೋಟಿ ತಪ್ಪುತ್ತದೆ. ಇಂತಹ ಯುವಪೀಳಿಗೆಯನ್ನು ಸರಿದಾರಿಗೆ ತರುವ ಹೊಣೆಗಾರಿಕೆ ಪ್ರತಿಯೊಬ್ಬರದ್ದೂ ಆಗಿದೆ. ದೃಢ ಸಂಕಲ್ಪ ಹೊಂದಿದಲ್ಲಿ ಸಹವಾಸದಿಂದಲೂ ದುಶ್ಚಟಗಳು ಅಂಟಿಕೊಳ್ಳಲು ಸಾಧ್ಯವಿಲ್ಲ. ಕುತೂಹಲಕ್ಕಾಗಿ ಆರಂಭಗೊಳ್ಳುವ ವ್ಯಸನಗಳು ಕೊನೆಗೆ ಮನುಷ್ಯನನ್ನು ಅಧಃಪತನದತ್ತ ಸಾಗಿಸುತ್ತವೆ ಎಂದರು.

ಸುದ್ದಿ ಮನೆಯ ಜಂಜಾಟದಲ್ಲಿರುವ ಪತ್ರಕರ್ತರು ಸಾಮಾಜಿಕ ಕಾಳಜಿಯಿಂದ ಮಾದಕ ವಸ್ತು ಜಾಗೃತಿ ಮೂಡಿಸುವ ಅಭಿಯಾನ ಮಾಡುತ್ತಿರುವುದು ಶ್ಲಾಘನೀಯವಾದ ಕೆಲಸ. ಇಂದು ಶಾಲಾ-ಕಾಲೇಜುಗಳಲ್ಲಿ ಗಾಂಜಾದಂತಹ ಮಾದಕ ವಸ್ತುಗಳು ವಿದ್ಯಾರ್ಥಿ ಸಮೂಹವನ್ನು ತಪ್ಪುದಾರಿಗೆ ಎಳೆಯುತ್ತವೆ. ಈ ಅನಿಷ್ಠಗಳ ವಿರುದ್ಧ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ. ವಿದ್ಯಾರ್ಥಿಗಳು ಅನ್ಯ ಸಂಗತಿಗಳಿಗೆ ಗಮನಕೊಡದೆ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಕಠಿಣ ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ಮಾದಕ ವ್ಯಸನಗಳ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದ ಕೊಡಚಾದ್ರಿ ಸರ್ಕಾದ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಹೆಚ್.ಕೆ.ಶ್ರೀಪತಿ ಹಳಗುಂದ ಅವರು, ಪ್ರಾಣಿಗಳು ಬೇಕಾದ್ದನ್ನು ಮಾತ್ರ ತಿನ್ನುತ್ತವೆ. ಆದರೆ ಮನುಷ್ಯರಾದ ನಮ್ಮ ದೇಹಕ್ಕೆ ಬೇಡವಾದದ್ದನ್ನೂ ತಿನ್ನುತ್ತೇವೆ. ಇದನ್ನೇ ವ್ಯಸನ ಎಂದು ಕರೆಯುತ್ತೇವೆ. ನಮ್ಮನ್ನು ನಾವು ಸಾಯಿಸಿಕೊಳ್ಳುವ ಈ ಪ್ರಕ್ರಿಯೆಯೇ ಪ್ರಳಯ. ಮಕ್ಕಳು ತಮ್ಮ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ಜಾಗೃತರಾಗಿರಬೇಕು. ಪೋಷಕರು ಹಾಗೂ ಶಿಕ್ಷಕ ವರ್ಗವೂ ಆದರ್ಶವಾಗಿದ್ದು, ಮಕ್ಕಳಿಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಮಕ್ಕಳಿಗೆ ದೇಶ ಕಾಯುವ ಸೈನಿಕ ಮತ್ತು ಅನ್ನಕೊಡುವ ರೈತ ಮಾದರಿ ವ್ಯಕ್ತಿಗಳಾಗಬೇಕು. ಸಿಗರೇಟ್ ಸೇದುವುದನ್ನು ಸಿನೆಮಾದಲ್ಲಿ ತೋರಿಸುವ ಚಿತ್ರನಟರಾಗಬಾರದು. ನೂರು ವರ್ಷ ಬಾಳುವ ಮನುಷ್ಯ ಅರ್ಧ ಆಯುಷ್ಯಕ್ಕೆ ಹೈರಾಣಾಗುತ್ತಾನೆ ಎಂದರೆ ನಮ್ಮ ಆರೋಗ್ಯ ಮತ್ತು ದುಶ್ಚಟಗಳೇ ಅದಕ್ಕೆ ಕಾರಣ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿ, ಪತ್ರಕರ್ತರು ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಕಾರ‍್ಯಗಳಲ್ಲಿ ತೊಡಗುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ಇತರರಿಗೆ ಮಾದರಿ ವ್ಯಕ್ತಿಗಳಾಗಿ ಬಾಳಬೇಕೆಂದರು.

ಸಂಘದ ಪ್ರಧಾನ ಕಾರ‍್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ‍್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್, ನಾಡ ಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀನಿವಾಸ್ ಕಾಮತ್, ಶ್ರೀಧರ ಉಡುಪ, ಎನ್ ದತ್ತಾತ್ರೇಯ ಉಡುಪ, ಅರವಿಂದ್ ಸಾಗರ್ ಸರ್ಕಾರಿ ಶಾಲೆಗಳ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು, ನವಶಕ್ತಿ ರಮೇಶ್, ಗೌತಮ್, ಶ್ರೀನಿವಾಸ್ ಹೆಚ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಮಾದಕ ವ್ಯಸನ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಭಿಯಾನಕ್ಕೆ ಸಹಿ ಸಂಗ್ರಹಿಸಲಾಯಿತು.

ಸಂಘದ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶಮೂರ್ತಿ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅನ್ವಿತಾ ಪಿ ಹೆಗಡೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಿಕಾ ವಿತರಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು‌. ನಗರ ರಾಘವೇಂದ್ರ ಸ್ವಾಗತಿಸಿದರು. ಸಬಾಸ್ಟಿನ್ ಮಾಥ್ಯೂಸ್ ನಿರೂಪಿಸಿದರು. ರವಿರಾಜ್ ಎಂ.ಜಿ. ಭಟ್ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!