ಸಾಗರ : ಜುಲೈ ೧೧ರಂದು ಸಾಗರ ತಹಶೀಲ್ದಾರ್ ಮಲ್ಲೇಶ್ ಪೂಜಾರ್ ಮಡಸೂರು ಗ್ರಾಮದ ಏಳು ಜನ ರೈತರ ವಿರುದ್ದ ಹಾಕಿರುವ ಕೊಲೆಯತ್ನ ಪ್ರಕರಣ ರಾಜಕೀಯ ಪ್ರೇರಿತವಾದದ್ದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ದೂರಿದ್ದಾರೆ.


ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಡಸೂರು ಗ್ರಾಮದ ಏಳು ಜನ ರೈತರನ್ನು ಕೊಲೆಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಭೂಕಬಳಿಕೆ ಇನ್ನಿತರೆ ಗಂಭೀರ ಪ್ರಕರಣಗಳಡಿ ಬಂಧಿಸಿದ್ದಾರೆ. ಇದನ್ನು ರೈತ ಸಂಘ ತೀವೃವಾಗಿ ಖಂಡಿಸುತ್ತಿದೆ ಎಂದು ಹೇಳಿದರು.


ಮಡಸೂರು ಗ್ರಾಮದ ಸರ್ವೇ ನಂ. ೭೧ರಲ್ಲಿ ೭ಜನ ರೈತರಿಗೆ ನೆಲಕಿಮ್ಮತ್ತು ಪಾವತಿಸಿಕೊಂಡು ದರಕಾಸ್ತು ಅಡಿ ಭೂಮಿ ಮಂಜೂರು ಆಗಿದೆ. ಇದಕ್ಕೆ ಸಂಬಂಧಪಟ್ಟ ರಶೀದಿ ರೈತರ ಬಳಿ ಇದೆ. ಹಿಂದೆ ರೈತರ ಜಮೀನು ಸರ್ವೇ ಮಾಡಿ ನಕ್ಷೆ ತಯಾರಿಸಲು ಎಡಿಎಲ್‌ಆರ್‌ಗೆ ಪತ್ರ ಸಹ ಬರೆಯಲಾಗಿದೆ. ಆದರೂ ರೈತರಿಗೆ ಸಾಗುವಳಿಪತ್ರ ನೀಡಿರಲಿಲ್ಲ. ರೈತರು ೦೯-೧೧-೨೦೨೦ರಂದು ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ತಮಗೆ ಸಾಗುವಳಿಚೀಟಿ ಕೊಡದೆ ಇರುವ ಬಗ್ಗೆ ಮನವಿ ಸಹ ಸಲ್ಲಿಸಿದ್ದಾರೆ ಎಂದು ಹೇಳಿದರು.
ಆದರೆ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಜಮೀನು ಮಂಜೂರು ಮಾಡಲು ಎಕರೆಗೆ ೧ಲಕ್ಷ ರೂ. ಲಂಚ ಕೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟ

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಸಿಟ್ಟಿಗೆದ್ದ ತಹಶೀಲ್ದಾರ್ ರೈತರ ಸುಪರ್ದಿಯಲ್ಲಿರುವ ಜಮೀನಿಗೆ ಟ್ರಂಚ್ ಹೊಡೆಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ನೊಂದ ರೈತರು ತಗಾದೆ ತೆಗೆದಿದ್ದಾರೆ. ಇದನ್ನೆ ದೊಡ್ಡದ್ದು ಮಾಡಿ ಏಳು ರೈತರ ಮೇಲೆ ಬೇರೆಬೇರೆ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿದೆ. ರೈತರನ್ನು ಜೈಲಿಗೆ ಕಳಿಸಿರುವ ಹಿಂದೆ ದುರುದ್ದೇಶ ಹಾಗೂ ರಾಜಕೀಯ ಒತ್ತಡ ಇರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ ಎಂದರು.


ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜು. ೨೪ರಂದು ಜೈಲ್‌ಭರೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. ಸಾಗರ ಪೇಟೆ ಠಾಣೆ ವೃತ್ತದಿಂದ ಸಬ್ ಜೈಲ್‌ವರೆಗೆ ಪ್ರತಿಭಟನೆ ನಡೆಸಿ ನಮ್ಮನ್ನು ಜೈಲಿಗೆ ಕಳಿಸಿ ಎಂಬ ಹಕ್ಕೊತ್ತಾಯ ಮಂಡಿಸಲಾಗುತ್ತದೆ. ಸುಳ್ಳು ದೂರಿನಡಿ ರೈತರನ್ನು ಬಂಧಿಸಿರುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಸ್ಥಳೀಯ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು. ರೈತರ ಮೇಲೆ ದಾಖಲು ಮಾಡಿರುವ ಸುಳ್ಳು ದೂರನ್ನು ಹಿಂದಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.


ಗೋಷ್ಟಿಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ, ಪ್ರಧಾನ ಕಾರ್ಯದರ್ಶಿ ಹೊಯ್ಸಳ ಗಣಪತಿಯಪ್ಪ, ಕಾರ್ಯದರ್ಶಿ ಭದ್ರೇಶ್ ಬಾಳಗೋಡು, ವಿಜಯಕುಮಾರ್ ಯಲಕುಂದ್ಲಿ ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!