ಶಿವಮೊಗ್ಗ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯ ಅತ್ಯಂತ ಮುಖ್ಯ. ನಾವು ಮಾಡುವ ಕೆಲಸವನ್ನೇ ಪರಿಣಾಮಕಾರಿಯಾಗಿ ನಿರ್ವಹಿಸಲು ಕೌಶಲ್ಯದ ನೈಪುಣ್ಯತೆ ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೌಶಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣನವರ್ ಹೇಳಿದರು.
ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಎಟಿಎನ್ಸಿಸಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಅಧ್ಯಯನ ಮಾಡುವ ಕೋರ್ಸ್ಗಳಿಂದ ವಿಷಯ ಜ್ಞಾನ ಅರಿತುಕೊಳ್ಳಬಹುದು. ಆದರೆ ವೃತ್ತಿ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಲು ವಿಷಯ ಜ್ಞಾನದ ಜತೆಯಲ್ಲಿ ಕೌಶಲ್ಯವು ಮುಖ್ಯ. ಯಾವುದೇ ವೃತ್ತಿ ಆಗಿರಲಿ ಅದಕ್ಕೆ ಸಾಮಾನ್ಯರಿಗಿಂತ ಮತ್ತಷ್ಟು ಉತ್ತಮವಾಗಿ ಮಾಡಲು ಕೌಶಲ್ಯ ಬೇಕಾಗುತ್ತದೆ. ವಿದ್ಯಾರ್ಥಿಗಳು ಕೌಶಲ್ಯ ಕಲಿಕೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೌಶಲ್ಯ ಅಧಿಕಾರಿ ಎಚ್.ಎಂ.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೌಶಲ್ಯದ ಮಾಹಿತಿ ಒದಗಿಸುವುದು, ಉದ್ಯಮಶೀಲತೆ ಶಿಬಿರ ಆಯೋಜಿಸುವುದು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳ ನಿರ್ಮಾಣ ಇಲಾಖೆ ಉದ್ದೇಶ. ಕೌಶಲ್ಯಯುತ ಯುವ ಸಮೂಹದಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ವೃತ್ತಿ ಕೌಶಲ್ಯದ ಕಲಿಕೆಯಿಂದ ಸ್ವಯಂ ಉದ್ಯೋಗ ಸಹ ಮಾಡಬಹುದಾಗಿದೆ. ಜೀವನಮಟ್ಟ ಸುಧಾರಿಸುವ ಜತೆಯಲ್ಲಿ ಉದ್ಯೋಗ ಸೃಷ್ಠಿ ಸಾಧ್ಯವಿದೆ. ಉದ್ಯೋಗ ಹುಡುಕುವ ಬದಲಾಗಿ ಹೊಸ ಸಂಸ್ಥೆಗಳ ನಿರ್ಮಾಣದ ಕಲ್ಪನೆಯನ್ನು ಯುವ ಸಮೂಹ ಸಾಕಾರಗೊಳಿಸಬೇಕು. ಕೌಶಲ್ಯ ಕರ್ನಾಟಕ ನಿರ್ಮಾಣದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಮಮತಾ.ಪಿ.ಆರ್. ಅಧ್ಯಕ್ಷತೆ ವಹಿಸಿದ್ದರು. ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಾಯಕ ಅಧಿಕಾರಿ ಟೀಕ್ಯಾನಾಯ್ಕ, ಸಮನ್ವಯ ಕಾಶಿ, ಡಾ. ನಾಗರಾಜ್, ಜಗದೀಶ್, ದೇವೆಂದ್ರ ನಾಯ್ಕ್, ಗಿರೀಶ್, ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.