ಶಿವಮೊಗ್ಗ: ಗೌರವಧನ ಬಿಡುಗಡೆಯೂ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಶಾಖೆ ವತಿಯಿಂದ ಇಂದು ಮಹಾವೀರ ಸರ್ಕಲ್‌ನಿಂದ ಮೆರವಣಿಗೆಯಲ್ಲಿ ಬಂದು ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.


ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಅಕ್ಷರ ದಾಸೋಹ ನೌಕರರ ಪಾತ್ರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಮಹಿಳೆಯರ ತಾಯ್ತನದ ಪರಿಶ್ರಮವಿದೆ. ಆದರೆ ಕೆಲಸಕ್ಕೆ ತಕ್ಕಂತೆ ವೇತನವಿಲ್ಲ. ಕನಿಷ್ಠ ೨೧ಸಾವಿರ ರೂ. ನೀಡಬೇಕು. ಮತ್ತು ಇವರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದಿನ ಸರ್ಕಾರ ಬಜೆಟ್‌ನಲ್ಲಿ ೧ಸಾವಿರ ರೂ. ಗೌರವ ಧನ ಹೆಚ್ಚಳ ಮಾಡಿತ್ತು. ಆದರೆ ಇದುವರೆಗೂ ಅದನ್ನು ಬಿಡುಗಡೆ ಮಾಡಿಲ್ಲ. ಮಾರ್ಗಸೂಚಿಯಲ್ಲಿ ನಾಲ್ಕು ಗಂಟೆ ಕೆಲಸವಿದ್ದರೂ ಕೂಡ ವಾಸ್ತವದಲ್ಲಿ ೬ ಗಂಟೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಮಾರ್ಗದರ್ಶಿ ಕೈಪಿಡಿಯಲ್ಲಿ ೬ ಗಂಟೆ ಕೆಲಸ ಎಂದು ತಿದ್ದುಪಡಿ ಮಾಡಬೇಕು. ನಿವೃತ್ತಿ ಹೊಂದಿದ ಮತ್ತು ಹೊಂದಲಿರುವ ನೌಕರರಿಗೆ ಇಡುಗಂಟು ನೀಡಬೇಕು. ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.


ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯೋಪಾಧ್ಯಾಯರು ನಿರ್ವಹಿಸುತ್ತಿದ್ದು, ಅದನ್ನು ಮುಖ್ಯ ಅಡಿಗೆದಾರರಿಗೆ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದ ಅಡಿಗೆ ಸಿಬ್ಬಂದಿಗಳ ಕುಟುಂಬಕ್ಕೆ ಕೆಲಸ ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನ ನೀಡಬೇಕು. ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡಿಗೆಯವರು ಇರಬೇಕು. ಬಿಸಿಯೂಟ ನೌಕರರನ್ನು ಡಿ. ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಹನುಮಮ್ಮ ಆರ್., ಪದಾಧಿಕಾರಿಗಳಾದ ಸುನೀತಾ, ಚಂದ್ರಮ್ಮ, ಅನಸೂಯ, ಭಾಗ್ಯಮ್ಮ ಇನ್ನಿತರರು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!