ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಬರುವ ಎಲ್ಲಾ ಚುನವಣೆಗಳ ಜವಾಬ್ದಾರಿಯನ್ನು ನಾನು ವಹಿಸಿಕೊಂಡು ಕಾಂಗ್ರೆಸ್ ಪಕ್ಷ iತ್ತೆ ವಿಜೃಂಭಿಸುವಂತೆ ಮಾಡುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಚಿವನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ. ಶಿಕ್ಷಣ ಇಲಾಖೆ ಒಂದು ಛಾಲೆಂಜಿಂಗ್ ಖಾತೆ. ಇದೊಂದು ದೊಡ್ಡ ಜವಾಬ್ದಾರಿ ಎಂದೇ ಭಾವಿಸಿದ್ದೇನೆ. ರಾಜ್ಯದಲ್ಲಿ ೧ಕೋಟಿ ೨೦ ಲಕ್ಷ ವಿದ್ಯಾರ್ಥಿಗಳು ಹಾಗೂ ೩.೫ ಲಕ್ಷ ಶಿಕ್ಷಕರಿದ್ದಾರೆ. ಈಗಾಗಲೇ ಬಿಜೆಪಿ ಅಪಪ್ರಚಾರ ಶುರು ಮಾಡಿದೆ. ಮುಖ್ಯಮಂತ್ರಿಗಳು ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿ ಬಿಜೆಪಿಯವರ ಬಾಯಿ ಮುಚ್ಚಿಸಿದ್ದಾರೆ. ಮತದಾರರು ಈಗಾಗಲೇ ಬಿಜೆಪಿಯ ವಾರಂಟಿಯನ್ನು ತೆಗೆದಿದ್ದಾರೆ ಎಂದರು.
ನರೇಂದ್ರ ಮೋದಿಯವರು ಶ್ರೀಮಂತರ ೧೭ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಹಾಗಿರುವಾಗಿ ಗ್ಯಾರಂಟಿ ಕೊಡುವುದು ದೊಡ್ಡ ವಿಷಯವೇನಲ್ಲ. ಅವರೇ ಈ ಕೆಲಸ ಮಾಡಬಹುದಿತ್ತು. ಮುಂಬರುವ ಲೋಕಸಭಾ ಚುನಾವಣೆಗೆ ನಾವು ಸಿದ್ಧವಾಗಬೇಕಾಗಿದೆ. ಸೋತವರಿಗೆ ಪಕ್ಷ ಬೆನ್ನೆಲುಬಾಗಿ ನಿಲ್ಲುತ್ತದೆ.ಬಿಜೆಪಿಯವರು ಏನನ್ನೂ ಮಾಡಿಲ್ಲ. ಅನ್ನಭಾಗ್ಯ, ಆಶ್ರಯ, ಭೂಹಕ್ಕು ನೀಡಿದ್ದು ಎಲ್ಲವೂ ಕಾಂಗ್ರೆಸ್ ಪಕ್ಷ. ಈ ವರ್ಷಪೂರ್ತಿ ಚುನಾವಣೆಗಳಿವೆ. ಮಲೆನಾಡು ಹಕ್ಕು ಹೋರಾಟ ಸಮಿತಿ ಮೂಲಕ ಹಕ್ಕುಪತ್ರಕ್ಕಾಗಿ ಬೇಡಿಕೆ ಇಟ್ಟಿದ್ದೆವು.
ಈಗ ನಮ್ಮದೇ ಸರ್ಕಾರ ಇದೆ. ಅರಣ್ಯ ಮಂತ್ರಿಯ ಜೊತೆಗೆ ಮಾತುಕತೆ ನಡೆಸಿ ಅಗತ್ಯವಿದ್ದಲ್ಲಿ ಕಾನೂನು ತಿದ್ದುಪಡಿ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಕೇಂದ್ರ ಸರ್ಕಾರ ಕೂಡ ಸಹಕರಿಸುವ ವಿಶ್ವಾಸವಿದೆ. ಗ್ಯಾರಂಟಿಗಳ ಬಗ್ಗೆ ಯಾವುದೇ ಅವಿಶ್ವಾಸ ಬೇಡ, ಒಳ್ಳೆಯ ರೀತಯಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು.
ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಧು ಬಂಗಾರಪ್ಪನವರು ಶಿಕ್ಷಣ ಸಚಿವರಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಈ ಹುದ್ದೆಯನ್ನು ಅವರು ಸದ್ಬಳಕೆ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ಜಾತಿಗಳನ್ನು ಗುರುತಿಸಬೇಕು. ತುಳಿತಕ್ಕೆ ಒಳಗಾದವರ ಬಗ್ಗೆ ಅನುಕಂಪವಿರಲಿ. ಶೋಷಣೆ ತಪ್ಪಿಸಲು ಪ್ರಯತ್ನಿಸಬೇಕು. ಮೀಸಲಾತಿ ಕಡೆ ಗಮನ ಹರಿಸಬೇಕು. ಮುಖ್ಯವಾಗಿ ಕಾಂಗ್ರೆಸ್ ಸಿದ್ಧಾಂತವನ್ನು ಪ್ರತಿಪಾದಿಸಬೇಕು. ಅವರು ನನಗಿಂತ ಚಿಕ್ಕವರು. ಶಿಕ್ಷಣ ಸಚಿವನಾಗಿನನಗೆ ಗೊತ್ತಿರುವುದನ್ನು ನಾನು ಕೂಡ ಅವರಿಗೆ ತಿಳಿಸುತ್ತೇನೆ. ಕಾಂಗ್ರೆಸ್‌ನ ಈ ಅಲೆಯನ್ನು ನೋಡಿದರೆ ಮುಂದೊಂದು ದಿನ ಮಧು ಬಂಗಾರಪ್ಪ ಕೂಡ ತಂದೆಯಂತೆ ಮುಖ್ಯಮಂತ್ರಿ ಆಗಬಹುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಧು ಬಂಗಾರಪ್ಪ ಅವರು, ನಮ್ಮ ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಸ್ತುವಾರಿ ಸಚಿವರು ಕೂಡ ಆಗುತ್ತಾರೆ. ಇದು ಹೆಮ್ಮೆಯ ವಿಷಯ. ಅವರು ಸಮರ್ಥವಾಗಿ ಸಮಸ್ಯೆಗಳನ್ನು ನಿಭಾಯಿಸಬಲ್ಲರು. ಆದರೆ ಜಿಲ್ಲೆಯಲ್ಲಿ ನೂರಾರು ಸಮಸ್ಯೆಗಳಿವೆ. ಅದು ಕೂಡ ಸವಾಲಾಗಿದೆ ಎಂದರು.
ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಬಿಜೆಪಿಯ ವಕ್ತಾರರಂತೆ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳಲ್ಲಿ ತೊಡಕಾಗಿದ್ದರು. ಇವರನ್ನೆಲ್ಲ ವರ್ಗಾವಣೆ ಮಾಡಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ದೂರ ಮಾಡಿದ್ದಾರೆ. ಅವರಿಗೆ ಅಭಿನಂದನೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮುಂದೆ ಬರಲಿರುವ ಜಿ.ಪಂ/ತಾಪಂ ಚುನಾವಣೆಯನ್ನು ಕೂಡ ನಾವು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಆರ್.ಎಂ. ಮಂಜುನಾಥ ಗೌಡ, ಹೆಚ್.ಸಿ ಯೋಗೇಶ್, ರೇಖಾ ರಂಗನಾಥ್, ಜಿ.ಡಿ.ಮಂಜುನಾಥ್, ಎಸ್.ಕೆ.ಮರಿಯಪ್ಪ, ವೇದಾ ವಿಜಯಕುಮಾರ್, ಅನಿತಾಕುಮಾರಿ, ಬಲ್ಕಿಷ್ ಭಾನು, ಶ್ರೀನಿವಾಸ ಕರಿಯಣ್ಣ, ವಿಜಯ್, ಮಧು, ಶಂಕರಘಟ್ಟ ರಮೇಶ್. ಎಸ್.ಪಿ. ಶೇಷಾದ್ರಿ, ದೇವೇಂದ್ರಪ್ಪ, ಹೆಚ್.ಪಿ. ಗಿರೀಶ್. ಸಿದ್ದಪ್ಪ, ವಿಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಹಲವರಿದ್ದರು.