ಚುನಾವಣೆ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಮತಗಳಿಸಲು ರೈತರ ಕಿವಿ ಮೇಲೆ ಹೂವಿಡುವ ತಂತ್ರವಾಗಿತ್ತು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಬುಧವಾರ ಶಾಸಕರ ನೂತನ ಕಚೇರಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಹಿಂದಿನ ಶಾಸಕರು ತಾವು ಮುಳುಗಡೆ ಸಂತ್ರಸ್ತ ಕುಟುಂಬದವರು, ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿರುವುದು ಹುಸಿಯಾಗಿದೆ ಎಂದು ಹೇಳಿದರು.
ಡಬಲ್ ಇಂಜಿನ್ ಸರ್ಕಾರವಿದ್ದು, ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಇದೀಗ ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು ಮುಳುಗಡೆ ಸಂತ್ರಸ್ತ ರೈತರಿಗೆ ಮಾಡಿದ ದ್ರೋಹವಾಗಿದೆ.
ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು, ಸಂಸದರು, ಹಿಂದಿನ ಶಾಸಕರು ಎಲ್ಲರೂ ರೈತರಿಗೆ ಮೋಸ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮುಳುಗಡೆ ಸಂತ್ರಸ್ತ ರೈತರ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಸಮಸ್ಯೆ ಅರಿವಿದ್ದು, ಸದ್ಯದಲ್ಲಿಯೆ ಈ ಬಗ್ಗೆ ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಸಭೆ ಕರೆದು ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಕಾಂಗ್ರೇಸ್ ಘೋಷಣೆ ಮಾಡಿದ ಗ್ಯಾರೆಂಟಿ ಯೋಜನೆ ಜಾರಿಗೆ ತರುವುದು ಖಚಿತ. ಐದು ಗ್ಯಾರೆಂಟಿಗಳ ಅನುಷ್ಟಾನಕ್ಕೆ ಸುಮಾರು ೫೦ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಇದಕ್ಕೆ ಕನಿಷ್ಟ ಒಂದು ತಿಂಗಳು ಕಾಲಾವಕಾಶ ತಗಲಿದರೂ ಅಚ್ಚರಿಯಿಲ್ಲ. ಕಾಂಗ್ರೇಸ್ ಸರ್ಕಾರ ಜನರಿಗೆ ನೀಡಿದ ಭರವಸೆ ಈಡೇರಿಸುವುದು ಖಚಿತ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಆವರಣದಲ್ಲಿಯೆ ನನ್ನ ಕಚೇರಿ ತೆರೆಯಲಾಗಿದ್ದು, ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಲು ಅವಕಾಶ ಇರುತ್ತದೆ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಕಚೇರಿ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸ್ಥಾನದಲ್ಲಿ ಕಚೇರಿ ಮಾಡಲಾಗಿದ್ದು, ಮಿನಿ ವಿಧಾನಸೌಧ ಲೋಕಾರ್ಪಣೆ ನಂತರ ಅಲ್ಲಿಯೂ ಸುಸಜ್ಜಿತವಾದ ಶಾಸಕರ ಕಚೇರಿ ತೆರೆಯಲಾಗುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಮುಖರಾದ ಚೇತನರಾಜ್ ಕಣ್ಣೂರು, ಮಲ್ಲಿಕಾರ್ಜುನ ಹಕ್ರೆ, ಸುರೇಶಬಾಬು, ಮಧುಮಾಲತಿ, ಅನಿತಾಕುಮಾರಿ, ಸುಮಂಗಲ ರಾಮಕೃಷ್ಣ, ಅಶೋಕ ಬೇಳೂರು, ತಾರಾಮೂರ್ತಿ, ಕೆ.ವಿ.ಜಯರಾಮ್, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.