ಶಿವಮೊಗ್ಗ: ನಿನ್ನೆ ಸುರಿದ ಭಾರೀ ಗಾಳಿ-ಮಳೆಗೆ ನಗರದ ಹಲವೆಡೆ ಭಾರೀ ಅವಾಂತರಗಳು ಸಂಭವಿಸಿದ್ದು,ಲಕ್ಷಾಂತರ ರೂ.ನಷ್ಟವಾಗಿದೆ.
ಕಳೆದ ಕೆಲವು ತಿಂಗಳಿಂದಲೇ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಜನ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರು. ನಿನ್ನೆಯ ಒಂದೇ ಒಂದು ಮಳೆಗೆ ಅನೇಕ ಕಡೆ ಹತ್ತಾರು ಮರಗಳು ಉರುಳಿ ಬಿದ್ದುದಲ್ಲದೆ, ವಿದ್ಯುತ್ ಕಂಬಗಳು ಕೂಡ ಧರೆಗುರುಳಿವೆ.ಮೂರು ಕಾರುಗಳು ಜಖಂಗೊಂಡಿವೆ. ಅನೇಕ ಕಡೆ ಮನೆಯ ಮೇಲ್ಛಾವಣಿಯ ಶೀಟುಗಳು ಹಾರಿ ಹೋಗಿವೆ.
ಬೊಮ್ಮನ ಕಟ್ಟೆಯ ಅಪೂರ್ವ ಪಿಯು ಕಾಲೇಜು ಮುಂಭಾಗ ಪ್ರಕಾಶ್ ಎಂಬುವವರ ಮನೆಗೆ ಬೇರೆ ಮನೆಯ ಮೇಲ್ಛಾವಣಿ ಶೀಟುಗಳು ಬಂದು ಅಪ್ಪಳಿಸಿದ್ದು ಲಕ್ಷಾಂತರ ರೂ. ನಷ್ಟವಾಗಿದ್ದು, ಪಾಲಿಕೆಗೆ ಅದನ್ನು ತೆರವುಗೊಳಿಸುವಂತೆ ಅವರು ಮನವಿ ಮಾಡಿದರೆ ನೀವೇ ತೆರವುಗೊಳಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವಿನೋಬನಗರದ ಒಂದನೇ ಹಂತದ ಎರಡನೇ ತಿರುವಿನಲ್ಲಿ ಮೂರು ಮರಗಳು ಬಿದ್ದು, ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ವಿನೋಬನಗರ ಆಶ್ರಯ ಬಿ. ಬಡಾವಣೆಯ ಲಕ್ಷ್ಮೀಬಾಯಿ ಎಂಬ ಗಾರೆ ಕೆಲಸದ ಮಹಿಳೆ ಕುರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಭಾರೀ ಮಳೆಗೆ ರಾಜಕಾಲುವೆಗೆ ಎಮ್ಮೆಯೊಂದು ಬಿದ್ದು, ಒದ್ದಾಡುತ್ತಿದ್ದಾಗ ಅಗ್ನಿಶಾಮಕ ದಳದವರು ಬಂದು ರಕ್ಷಣೆ ಮಾಡಿದ್ದಾರೆ.
ಸೋಮಿಕೊಪ್ಪ ಭೋವಿ ಕಾಲೋನಿಯಲ್ಲಿ ಗೋಪಿನಾಥ್ ಎಂಬುವವರ ಮನೆಯ ಸೂರು ಗಾಳಿಗೆ ಹಾರಿಹೋಗಿದೆ. ದೈವಜ್ಞ ಕಲ್ಯಾಣ ಮಂದಿರದ ಹಿಂಭಾಗದ ಮನೆಯ ಆವರಣದಲ್ಲಿದ್ದ ತೆಂಗಿನ ಮರ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ದೊಡ್ಡ ಹಾನಿ ತಪ್ಪಿದೆ.
ದುರ್ಗಿಗುಡಿಯ ಸಿಂಡಿಕೇಟ್ ಬ್ಯಾಂಕ್ ಬಳಿ ಬೃಹತ್ ತೆಂಗಿನ ಮರವೊಂದು ಉರುಳಿಬಿದ್ದು ಎರಡು ಕಾರುಗಳು ಜಖಂಗೊಂಡಿದ್ದು, ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ನಿನ್ನೆ ಸಂಜೆ ೫ ಗಂಟೆಯಿಂದ ಆರಂಭವಾದ ಭಾರೀ ಗಾಳಿ ಮಳೆಗೆ ನಗರದೆಲ್ಲೆಡ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕೆಲವೆಡೆ ಸುಗಮ ಸಂಚಾರಕ್ಕೂ ಅಡ್ಡಿಯಾಗಿತ್ತು.
ಮುಂಬರುವ ಮುಂಗಾರು ಮಳೆಗೆ ಪೂರ್ವಭಾವಿಯಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕೂಡಲೇ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಈಗಾಗಲೇ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಚರಂಡಿಗೆ ಹರಿಯದೆ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಯುಜಿಡಿ ಮ್ಯಾನ್ಹೋಲ್ಗಳು ಅನೇಕ ಕಡೆ ರಸ್ತೆಗಿಂತ ಕೆಳಭಾಗದಲ್ಲಿದ್ದು, ಕೆಲವೆಡೆ ಮೇಲ್ಭಾಗದಲ್ಲೂ ಇರುವುದರಿಂದ ನೀರು ನಿಂತಾಗ ವಾಹನ ಸವಾರರಿಗೆ ಅಪಾಯ ಕಾದಿದೆ. ಯುಜಿ ಕೇಬಲ್ಗಳು ಅನೇಕ ಕಡೆ ಹಾಗೆಯೇ ಬಿಡಲಾಗಿದ್ದು ಅದು ಕೂಡ ಅಪಾಯಕ್ಕೆ ಕಾರಣವಾಗಬಹುದು. ಬಾಕ್ಸ್ ಚರಂಡಿಗಳಿಗೆ ಮುಚ್ಚಳ ಕೂಡ ಹಾಕದೆ ಬಿಟ್ಟಿದ್ದ, ಮಳೆ ಬಂದಾಗ ವಿದ್ಯುತ್ ಕೈಕೊಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ.
ಎಲ್ಲಕ್ಕೂ ಮಿಗಿಲಾಗಿ ಅಧಿಕಾರಿಗಳು ಅವಘಡ ಸಂಭವಿಸಿದಾಗ ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ನೀಡಬೇಕಾಗಿದ್ದು, ಸಂಬಂಧಪಟ್ಟವರು ಈ ಬಗ್ಗೆ ಸಂಪರ್ಕ ಸಂಖ್ಯೆ ನೀಡಿ ಸ್ಪಂದಿಸಬೇಕಾಗಿದೆ. ನಿನ್ನೆಯ ಎರಡು ಗಂಟೆಯ ಮಳೆ ನಗರದಲ್ಲಿ ಅನೇಕ ಅನಾಹುತಗಳಿಗೆ ಕಾರಣವಾಗಿದ್ದು, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳಬೇಕಾಗಿದೆ.