Tungataranga Specil News/ ಶಿವಮೊಗ್ಗ, ಮೇ.26:
ಅಬ್ಬಲಗೆರೆ ಗ್ರಾಮದ ಮದ್ದಣ್ಣ ಕೆರೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮಣ್ಣನ್ನು ಕೆಲವು ಅಧಿಕಾರಿಗಳು ಸೇರಿಕೊಂಡು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಮಾರಾಟ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಜಗದೀಶ್ ಮತ್ತು ವಕೀಲ ಗೇಮ್ಯಾ ನಾಯ್ಕ ಆಗ್ರಹಿಸಿದರು.
ನಾವು ಮಾತ್ರ ಸರ್ಕಾರಕ್ಕೆ ರಾಯಲ್ಟಿ ಕಟ್ಟಿರೋದು, ಅಕ್ರಮದವರಿಗೆ ದಂಡ ಹಾಕಲಿ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ
ನಾವು ಸರ್ಕಾರಕ್ಕೆ ರಾಯಲ್ಟಿ ಹಣವನ್ನು ಕಟ್ಟಿ ಸರ್ಕಾರಿ ನೌಕರರಿಗಾಗಿ ಮೀಸಲು ಮಾಡಿರುವ ನಿವೇಶನಗಳ ವಿಷಯಕ್ಕೆ ಸಂಬಂಧಪಟ್ಟಂತೆ ಲೇ ಔಟ್ ಗಳಿಗೆ ಮಣ್ಣು ಹಾಕಿಸಿಕೊಂಡಿದ್ದೇವೆ. ಕೆರೆಯ ಮಣ್ಣಿಗೂ ಸಹ ರಾಯಲ್ಟಿ ಕಟ್ಟಿ ನಿಜವಾಗಿ ಹಾಗೂ ನ್ಯಾಯ ಬದ್ಧವಾಗಿ ಕರ್ತವ್ಯ ನಿರ್ವಹಿಸುವುದು ನಮ್ಮ ಹಿರಿಮೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸಿಎಸ್ ಷಡಕ್ಷರಿ ತಿಳಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ’ತುಂಗಾತರಂಗ” ದಿನಪತ್ರಿಕೆ ಸೋಮಿನಕೊಪ್ಪ ಭೋವಿ ಕಾಲೋನಿಯ ಕೆರೆಯ ವಿಷಯದಲ್ಲಿ ಅಕ್ರಮ ಮಾಡಿರುವವರ ಹಾಗೂ ಅಕ್ರಮವಾಗಿ ಮಣ್ಣು ಎತ್ತಿರುವವರ ಬಗ್ಗೆ ಸುದ್ದಿ ಬರೆದ ಬೆನ್ನಲ್ಲೇ ಹಲವೆಡೆ ತುಂಗಾತರಂಗ ಹುಡುಕಾಟ ನಡೆಸಿದ್ದಾಗ ಅಬ್ಬಲಗೆರೆ ವಿಷಯದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿಯವರೊಂದಿಗೆ ಪತ್ರಿಕೆ ಮಾತನಾಡಿಸಿದಾಗ ಈ ವಿಷಯ ತಿಳಿಸಿದ್ದಾರೆ.
ನಾವು ನ್ಯಾಯಯುತವಾಗಿ ಕೆರೆಯ ಮಣ್ಣನ್ನು ನಮ್ಮ ಸರ್ಕಾರಿ ನೌಕರರ ಲೇಔಟ್ ಗೆ ಹಣವನ್ನು ಕಟ್ಟಿ ಪಡೆದಿದ್ದೇವೆ. ಹಣ ಕಟ್ಟಿದವರು ಬೇರೆ ಯಾರು ಇಲ್ಲ. ಅದನ್ನು ಬೇಕಿದ್ದರೆ ಗಮನಿಸಿ. ಅವರನ್ನು ತಡೆಹಿಡಿಯಲಿ. ದಂಡ ಹಾಕಲಿ ಎಂದು ಪತ್ರಿಕೆಯೊಂದಿಗೆ ಸಾರ್ವಜನಿ ಕವಾಗಿ ಮಾಹಿತಿ ನೀಡಿದ್ದರು.
ಒಟ್ಟಾರೆ ಅಬ್ಬಲಗೆರೆ ಕೆರೆ ಸೇರಿದಂತೆ ಸೋಮಿನಕೊಪ್ಪ ಕೆರೆ ವಿಷಯದಲ್ಲಿ ಕಾಣದ ಕೈಗಳು ಅದರಲ್ಲೂ ಹಿರಿಯ ವಿಐಪಿ ಎಂಬ ಹೆಸರಿನ ಪತ್ರಿಕಾ ರಂಗದ ನಾಯಕ ಮಣಿಗಳು ಕೈ ಜೋಡಿಸಿ ತಮ್ಮ ತಮ್ಮ ನಿವೇಶನಗಳ ಲೇ ಔಟ್ ಗಳಿಗೆ ಅಕ್ರಮವಾಗಿ ಮಣ್ಣು ಹೊಡೆದುಕೊಳ್ಳುತ್ತಿರುವುದು ಕಂಡುಬರುತ್ತದೆ. ಹೀಗಾಗಿ ಈ ಬಗ್ಗೆ ಒಂದು ತನಿಖೆ ಅತ್ಯಗತ್ಯ. ಜಿಲ್ಲಾಧಿಕಾರಿಗಳೇ ಗಮನಿಸಿ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಬ್ಬಲಗೆರೆಯ ಸರ್ವೆ ನಂ. ೧೧೯ರಲ್ಲಿ ಸುಮಾರು ೩೫.೪ ಎಕರೆ ವಿಸೀರ್ಣದಲ್ಲಿ ಕೆರೆ ಇದೆ. ಈಕೆರೆಯಲ್ಲಿ ಫಲವತ್ತಾದ ಮಣ್ಣನ್ನು ಖಾಸಗಿ ಲೇಔಟ್‌ಗೆ ಸಾಗಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಗೃಹ ನಿರ್ಮಾಣ ಸಹಕಾರ ಸಂಘದ ಕಾರ್ಯದರ್ಶಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.
ಮಣ್ಣನ್ನು ಸಾಗಿಸಲು ನೀರಾವರಿ ಇಲಾಖೆಯ ಅನುಮತಿ ಬೇಕಾಗುತ್ತದೆ. ಆದರೆ ನಿಯಮ ಮೀರಿ ನಡೆಯುತ್ತಿರುವವರು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳೊಡನೆ ಶಾಮೀಲಾಗಿದ್ದಾರೆ. ಗಣಿಗಾರಿಕೆ ಇಲಾಖೆ ಕೂಡ ಇದು ನಮಗೆ ಸಂಬಂಧಿಸಿದ್ದಲ್ಲ ಎಂದು ಹೇಳದೆ ಪಂಚಾಯಿತಿಯ ಮೂಲಕ ಮಣ್ಣು ಸಾಗಿಸಲು ಅನುಮತಿ ಕೊಡಿಸಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಕೂಡ ಇವರ ಜೊತೆ ಶಾಮೀಲಾಗಿ ಕೆರೆಯ ಹೂಳನ್ನು ತೆಗೆದುಕೊಂಡು ಹೋಗಲು ನಿರಪೇಕ್ಷಣಾ ಪತ್ರವನ್ನು ನೀಡಿದ್ದಾರೆ. ತನ್ನ ವ್ಯಾಪ್ತಿಗೆ ಬರದಿದ್ದರೂ ಕೂಡ ಪಿಡಿಒ ಅವರು ಈ ಪತ್ರ ನೀಡಿರುವುದು ಕಾನೂನಿಗೆ ವಿರೋಧ ವಾಗಿದೆ ಎಂದರು.
ಪಿಡಿಒ ಅವರು ತಮ್ಮ ಮೇಲಾಧಿಕಾರಿಗಳ ಅನುಮತಿ ಪಡೆಯದೆ ಜಿಲ್ಲಾ ಅಥವಾ ತಾಲೂಕು ಪಂಚಾಯಿತಿ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿದ್ದಾರೆ. ಅಧಿಕಾರಿಗಳು ಶಾಮೀಲಾಗಿ ಸರ್ಕಾರಕ್ಕೆ ಅತ್ಯಂತ ಕಡಿಮೆ ರಾಜಧನ ಪಾವತಿಸಿ ಸುಮಾರು ಕೋಟ್ಯಂತರ ರೂ.ಬೆಲೆ ಬಾಳುವ ೫ ಸಾವಿರ ಲೋಡ್ ಮಣ್ಣನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಸರ್ಕಾರಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ ಮಾಡುವ ಜಾಗಕ್ಕೆ ತುಂಬಿಸಿಕೊಂಡಿದ್ದಾರೆ. ಕೇವಲ ಗೃಹ ನಿರ್ಮಾಣ ಸಂಘದ ನಿವೇಶನ ಜಾಗಕ್ಕಲ್ಲದೆ ಖಾಸಗೀ ಲೇಔಟ್‌ಗೂ ಕೂಡ ಮಣ್ಣು ಸಾಗಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಅಧಿಕಾರಿಗಳೊಂದಿಗೆ ಶಾಮೀ ಲಾಗಿ ಸಂಘದ ಇತರೆ ಸದಸ್ಯರಿಗೆ ಅತಿ ಕಡಿಮೆ ಬೆಲೆಯಲ್ಲಿ ನಿವೇಶನ ನೀಡುತ್ತೇವೆಂದು ಪಂಚಾಯಿತಿಗೆ ಪತ್ರ ಬರೆದು ಅವರ ಅನುಕೂಲಕ್ಕೆ ತಕ್ಕಂತೆ ಸ್ವಂತ ಅಭಿವೃದ್ಧಿಗಾಗಿ ನೂರಾರು ಕೋಟಿ ಹಣ ಲೂಟಿ ಮಾಡಿ ದ್ದಾರೆ. ಆದ್ದರಿಂದ ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಹ ನೀಡಲಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಗಿರೀಶ್ ಬುಕ್ಲಾಪುರ, ಚಂದ್ರಶೇಖರ್, ಕಮಲಾಹಸನ್, ನೂನ್ಯಾ ನಾಯ್ಕ, ವೆಂಕಟೇಶ್ ಇದ್ದರು.