ಶಿವಮೊಗ್ಗ: ಸಾಗರ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವೆ ಎಂದು ಶಾಸಕರಾಗಿ ಆಯ್ಕೆಯಾಗಿರುವ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಾಗರದ ಜನತೆ ನನ್ನ ಕೈ ಹಿಡಿದಿದ್ದಾರೆ.
ಅವರಿಗೆ ನನ್ನ ಕೃತಜ್ಞತೆಗಳು. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳತ್ತ ಗಮನಹರಿಸುತ್ತೇನೆ. ಮುಖ್ಯವಾಗಿ ಶಿಕ್ಷಣ, ರಸ್ತೆ, ಆರೋಗ್ಯಕ್ಕೆ ಒತ್ತುಕೊಡುತ್ತೇನೆ
. ಭೂಮಿ ಕಳೆದುಕೊಂಡವರು ಬಹಳಷ್ಟು ಜನರಿದ್ದಾರೆ. ಅವರ ಸಮಸ್ಯೆಗಳ ಬಗ್ಗೆಯೂ ಗಮನಹರಿಸುತ್ತೇನೆ. ಜನರ ಋಣ ತೀರಿಸಲು ಗೌರವಯುತವಾಗಿ ಶಾಸಕ ಸ್ಥಾನವನ್ನು ಬಳಸಿಕೊಳ್ಳುತ್ತೇನೆ ಎಂದರು.
ಬಿಜೆಪಿಯವರು ನನಗೆ ಮೋಸ ಮಾಡಿದರು. ಈಗ ಅದರ ಫಲ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಾನು ಹೆಚ್ಚೇನೂ ಮಾತನಾಡುವುದಿಲ್ಲ. ಸೊರಬದಲ್ಲಿ ಮಧು ಬಂಗಾರಪ್ಪ ಗೆದ್ದಿದ್ದಾರೆ ಅವರಿಗೂ ನನ್ನ ಅಭಿನಂದನೆಗಳು. ಪಕ್ಷದ ಹೈಕಮಾಂಡ್ ಇಂದು ಸಂಜೆಯೇ ಬೆಂಗಳೂರಿಗೆ ಬರಲು ತಿಳಿಸಿದ್ದಾರೆ. ಅಲ್ಲಿಗೆ ತೆರಳುತ್ತೇನೆ ಎಂದರು.