ಶಿವಮೊಗ್ಗದ ಜನರು ತಾಯ್ತನದ ರಾಜಕಾರಣವನ್ನು ಬೆಂಬಲಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿದರು.
ಅವರು ಇಂದು ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್‌ನಲ್ಲಿ ವಾಯುವಿಹಾರಕ್ಕೆ ಬಂದವರಲ್ಲಿ ಮತಯಾಚಿಸಿ ಮಾತನಾಡಿ,

ಶಿವಮೊಗ್ಗಕ್ಕೆ ಹೊಸ ರಾಜಕಾರಣ ಬೇಕಾಗಿದೆ. ವೈಶಮ್ಯ ದ್ವೇಷ, ಗದ್ದಲಗಳಿಂದ ಕಂಗೆಟ್ಟು ಹೋಗಿರುವ ಧರ್ಮಗಳ ನಡುವೆ ಗೋಡೆ ಎದ್ದಿರುವ ಇಂತಹ ಸಂದರ್ಭದಲ್ಲಿ ತಾಯಿ ಪ್ರೀತಿ ಕಳೆದುಕೊಂಡಿದೆ. ವಿಶೇಷವಾಗಿ ಹಳೇ ಶಿವಮೊಗ್ಗದಲ್ಲಿ ಈ ದ್ವೇಷ ಹೆಚ್ಚಿದೆ. ಹೊಸ ಶಿವಮೊಗ್ಗಕ್ಕೂ ಇದು ಅಂಟುತ್ತಿದೆ. ಸಹನೆ ಕಳೆದುಕೊಂಡವರು ಅಶಾಂತಿಯ ಮಾತನಾಡುತ್ತಿದ್ದಾರೆ. ಉಸಿರುಗಟ್ಟುವ ವಾತಾವರಣದ ಶಿವಮೊಗ್ಗಕ್ಕೆ ವಾತ್ಸಲ್ಯದ, ಮಮಕಾರದ ರಾಜಕಾರಣಿಗಳು ಬೇಕು. ಜೆಡಿಎಸ್ ಪಕ್ಷ ತಾಯ್ತನಕ್ಕೆ ಪೂರಕ ಮತ್ತು ಪ್ರೇರಕವಾಗಿದೆ ಎಂದರು.


ಜೆಡಿಎಸ್ ಮುಖಂಡ ವೈ.ಹೆಚ್. ನಾಗರಾಜ್ ಮಾತನಾಡಿ, ಈ ಬಾರಿ ಆಯನೂರು ಮಂಜುನಾಥ ಗೆಲ್ಲುವುದು ಖಚಿತ. ಅವರು ಮಂತ್ರಿಯೂ ಆಗುತ್ತಾರೆ. ಶಿವಮೊಗ್ಗದಲ್ಲಿ ಶಾಂತಿಯ ಜೊತೆಗೆ ಅಭಿವೃದ್ಧಿಯೂ ಆಗುತ್ತದೆ. ಯಾವ ರಾಷ್ಟ್ರೀಯ ಪಕ್ಷಗಳಿಗೂ ಬಹುಮತ ಬರುವುದಿಲ್ಲ. ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುತ್ತಾರೆ ಎಂದರು.


ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಈಗ ವೀರಶೈವ ಲಿಂಗಾಯತರು ನೆನಪಾಗುತ್ತಿದ್ದಾರೆ. ಸಂಕಲ್ಪ ಸಭೆಗಳ ಮೂಲಕ ಓಲೈಕೆಗೆ ಮುಂದಾಗಿದ್ದಾರೆ. ಅವರು ಯಾವ ಎಷ್ಟೇ ಸಭೆ ನಡೆಸಿದರೂ ಕೂಡ ಮತಗಳು ಬದಲಾವಣೆಯಾಗುವುದಿಲ್ಲ. ಅವರು ಮಾಡುತ್ತಿರುವ ಸಂಕಲ್ಪ ಸಭೆ ಸಮುದಾಯದ ಪ್ರತೀಕವಲ್ಲ. ಕೆಲವರ ಹಿತಾಸಕ್ತಿ ಅಷ್ಟೆ ಎಂದರು.


ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯನಾರಾಯಣ, ಜಯಣ್ಣ, ಧೀರಾಜ್ ಹೊನ್ನವಿಲೆ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!