ಶಿವಮೊಗ್ಗ: ದಾವಣಗೆರೆಯ ದಿ ಟೀಮ್ ಅಕಾಡೆಮಿ ವತಿಯಿಂದ ಶಿವಮೊಗ್ಗದಲ್ಲಿ ಪ್ರಸಕ್ತ ಸಾಲಿನಿಂದ ದಿ ಟೀಮ್ ಪದವಿ ಪೂರ್ವ ಕಾಲೇಜ್ ಆರಂಭವಾಗಲಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ.ಎಂ. ಮಂಜಪ್ಪ ಹೇಳಿದರು.

ಅವರು ಮೀಡಿಯಾ ಹೌಸ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2015 ರಲ್ಲಿ ದಾವಣಗೆರೆಯಲ್ಲಿ ಹೊಸ ಭರವಸೆ, ಕನಸುಗಳೊಂದಿಗೆ ದಿ ಟೀಮ್ ಅಕಾಡೆಮಿ ಆರಂಭವಾಗಿದ್ದು, ನಮ್ಮ ಸಂಸ್ಥೆಯ ಅಡಿಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಕಳೆದ 8 ವರ್ಷಗಳಿಂದ ಸ್ಥಾನ ಪಡೆಯುತ್ತಾ ಬಂದಿದ್ದಾರೆ ಎಂದರು.

2018 ರಲ್ಲಿ ದಾವಣಗೆರೆ ಜಿಲ್ಲೆಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. 2018 -19 ನೇ ಸಾಲಿನಲ್ಲಿ ಮೂವರು ವಿದ್ಯಾರ್ಥಿಗಳು, 2020 -21 ರಲ್ಲಿ ಮೂವರು ವಿದ್ಯಾರ್ಥಿಗಳು, 2021 -22 ರಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ 2022 -23 ರಲ್ಲಿ ಇಬ್ಬರು ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸುರತ್ಕಲ್ ಎನ್ಐಟಿಕೆಯಲ್ಲಿ ಇಂಜಿನಿಯರಿಂಗ್ ಸೀಟ್ ಪಡೆದಿದ್ದಾರೆ ಎಂದರು.

2021 -22 ರಲ್ಲಿ 28 ವಿದ್ಯಾರ್ಥಿಗಳು, 2022 -23 ರಲ್ಲಿ 38 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ 650 ಕ್ಕಿಂತ ಹೆಚ್ಚು ಅಂಕ ಪಡೆದು ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಪಡೆದಿದ್ದಾರೆ. ಇಂಜಿನಿಯರಿಂಗ್ ವಿಭಾಗದ ಕೆಸಿಇಟಿ ಪರೀಕ್ಷೆಯಲ್ಲಿ 1 ಸಾವಿರದೊಳಗೆ ರ್ಯಾಂಕ್ ಪಡೆದು ಪ್ರತಿಷ್ಠಿತ ಕಾಲೇಜ್ ಗಳಲ್ಲಿ ಇಂಜಿನಿಯರಿಂಗ್ ಸೀಟ್ ಪಡೆದಿದ್ದಾರೆ. ಹಾಗೂ ಬಿಎಸ್ಸಿ ಅಗ್ರಿಕಲ್ಚರ್ ನಲ್ಲಿ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.

ಇದರಿಂದಾಗಿ ಶಿವಮೊಗ್ಗದಲ್ಲೂ ಸಹ ಕಾಲೇಜ್ ಆರಂಭಿಸಲು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ರವೀಂದ್ರನಗರದ ಎರಡನೇ ಹಂತದಲ್ಲಿ ದಿ ಎಜುಕೇರ್ ಸ್ಕೂಲ್ ನಲ್ಲಿ ಕಾಲೇಜ್ ಆರಂಭಿಸಲಾಗುತ್ತಿದೆ. ಪಿಸಿಎಂಬಿ, ಪಿಸಿಎಂಸಿಎಸ್ ಸಂಯೋಜನೆಗಳು ಹಾಗೂ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷಾ ವಿಷಯಗಳನ್ನೊಳಗೊಂಡಂತೆ ಪ್ರವೇಶಾತಿ ಆರಂಭಿಸುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಸುರೇಶ್ ಬಾಬು, ಪವನ್ ಕುಮಾರ್, ಮೇಲುಗಿರಿಯಪ್ಪ, ಶಶಿಕುಮಾರ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!