ಶಿವಮೊಗ್ಗ: ಕಳೆದ ಐದು ದಿನಗಳ ಹಿಂದಷ್ಟೇ 50ರ ಹಂಚಿನಲ್ಲಿದ್ದ ಶಿವಮೊಗ್ಗ ಕೊರೊನಾ ಸೋಂಕಿತರ ಸಂಖ್ಯೆ ಈಗ 73 ಅಂಕೆಯನ್ನು ನಿನ್ನೆಯವರೆಗೂ ತೋರಿಸುತ್ತಿದ್ದರೂ ಸಹ ನಿನ್ನೆ ಸಂಜೆಯಿಂದ ಲಭಿಸಿದ ಮಾಹಿತಿಯಾನುಸಾರ ಶಿವಮೊಗ್ಗ ಹಾಗೂ ಇದರ ಸರಹದ್ದಿನಲ್ಲೇ 10ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಈಗಷ್ಟೇ ಶಿವಮೊಗ್ಗದ ವಂದನಾ ಟಾಕೀಸ್ ಹಿಂಭಾಗದ ಬಡಾವಣೆಯನ್ನು ಕಂಟೈನ್ಮೆಂಟ್ ಜೋನ್ ಅನುಸಾರ ಸೀಲ‍್ ಡೌನ್ ಮಾಡಲು ಮುಂದಾಗಿದ್ದಾರೆಂದು ತಿಳಿಸಿರುವ ಮೂಲಗಳು ಅಲ್ಲಿನ ನಿವಾಸಿಯೋರ್ವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಕೋವಿಡ್-19 ಸೋಂಕು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಬಡಾವಣೆಗೆ ಸೂಕ್ತ ಔಷಧಿ ಸಿಂಪಡಿಸುವ ಜೊತೆಗೆ ಅಲ್ಲಿನ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇದೇ ಮೂಲಗಳು ಹೇಳಿವೆ.
ವಿಶೇಷವೆಂದರೆ ಶಿವಮೊಗ್ಗ ಹೊರ ವಲಯದ ಆಶ್ರಮದ ಸ್ವಾಮೀಜಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಸಂಪರ್ಕದ ಸುಳಿವು ಹುಡುಕಲು ಇಲಾಖೆ ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಆಶ್ರಮವನ್ನು ಈಗಾಗಲೇ ಸೀಲ್‌ಡೌನ್ ಮಾಡಲಾಗಿದೆ ಎಂದು ಚಿತ್ರದ ಮೂಗಳು ತಿಳಿಸಿದ್ದರೂ ಸಹ ಅಧಿಕೃತವಾಗಿ ಜಿಲ್ಲಾಧಿಕಾರಿಗಳು ಈ ಜಾಗವನ್ನು ಸೀಲ್‌ಡೌನ್ ಎಂದು ಆದೇಶಿಸಬೇಕಾಗಿರುವುದು ಕಂಡು ಬರುತ್ತಿದೆ.
ಇಂದು ಸಂಜೆ 9 ಕೋವಿಡ್-19 ಪ್ರಕರಣಗಳು ದಾಖಲಾಗುವ ನಿರೀಕ್ಷೆಗಳು ಇದೇ ಎಂದು ಹೇಳಲಾಗುತ್ತಿದ್ದರೂ ಸಹ ಅದಕ್ಕೂ ಹೆಚ್ಚು ಪ್ರಕರಣಗಳು ಸ್ಥಳೀಯ ಬುಡದಲ್ಲಿ ಸಾಮಾನ್ಯ ಸಂಪರ್ಕಕ್ಕೆ ಸಿಗದೇ ದೊರೆಯುತ್ತಿರುವುದು ಮತ್ತಷ್ಟು ಆತಂಕ ಸೃಷ್ಠಿಸಿದೆ.
ಪಾಪುಲರ್ ರೈಸ್ ಮಿಲ್ ಹಿಂಭಾಗ ಸಹ ಏರಿಯಾವೊಂದನ್ನು ಸೀಲ್‌ಡೌನ್ ಮಾಡಲು ಇಲಾಖೆ ಮುಂದಾಗಿದೆ ಎಂದು ಇದೇ ಮೂಲಗಳು ಸ್ಪಷ್ಟಪಡಿಸುತ್ತಿವೆ.
ಒಟ್ಟಾರೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ರಕ್ಷಣಾ ಇಲಾಖೆ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಜೊತೆಗೆ ಅದು ಹರಡದಂತೆ ನೋಡಿಕೊಳ್ಳಲು ಸಾಕಷ್ಟು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.