ಶಿವಮೊಗ್ಗ: ಜೀವ ಇದ್ರೆ ಜೀವನ ಎನ್ನುವ ಈ ಕೊರೊನಾ ಸಮಯದಲ್ಲಿ ಶಿಕ್ಷಣ ವ್ಯವಸ್ಥೆ ಅದರಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಬಹುತೇಕ ಶಾಲೆಗಳು ಅನಾಥ ಪ್ರೆಜ್ಞೆ ಅನುಭವಿಸುವ ಸ್ಥಿತಿ ಬಂದೋದಗಿದೆ.
ಮಿತಿ ಮೀರಿದ ಶುಲ್ಕ ವಸೂಲಾತಿಯ ಕೆಲವು ಶಾಲೆಗಳನ್ನು ಹೊರತುಪಡಿಸಿ ಉಳಿದ ಬಹಳಷ್ಟು ಶಾಲೆಗಳಲ್ಲಿ ಆ ವರುಷದ ವಿದ್ಯಾರ್ಥಿಗಳ ಶುಲ್ಕದಿಂದಲೇ ಶಿಕ್ಷಕರ ವೇತನ, ಶಾಲೆಯ ದುರಸ್ಥಿ ಹಾಗೂ ಶಿಕ್ಷಣದ ಅಗತ್ಯತೆಯ ವ್ಯವಸ್ಥೆಗಳನ್ನು ಪೂರೈಸುವುದಕ್ಕೆ ಬಳಕೆಯಾಗುತ್ತದೆ. ಆದರೆ ಮಿತಿ ಮೀರಿದ ಶುಲ್ಕ ವಸೂಲಿಯ ಕೆಲ ಶಾಲೆಗಳನ್ನು ಮುಂದಿಟ್ಟುಕೊಂಡು ಎಲ್ಲಾ ಖಾಸಗಿ ವಿದ್ಯಾಸಂಸ್ಥೆಗಳನ್ನು ಒಂದೇ ತಕ್ಕಡಿ ಯಲ್ಲಿಟ್ಟಂತೆ ಲೆಕ್ಕ ಹಾಕಿದರೆ ಹೇಗೆ ಎಂಬ ಪ್ರಶ್ನೆ ಈಗ ಮೂಡಲು ವಿದ್ಯಾ ರ್ಥಿಗಳಿಂದ ಡೋನೇಷನ್ ಪಡೆಯ ಬಾರದು ಹಾಗೂ ಅರ್ಧ ಶುಲ್ಕ ವಸೂಲಿ ಮಾಡಬೇಕು ಎಂಬ ಕೆಲವರ ಆಗ್ರಹದ ಹಿನ್ನೆಲೆಯಲ್ಲಿ ಮೂಡಿದೆ.
ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ನೀಡುವ ಜವಾಬ್ದಾರಿಯನ್ನು ಹೊಂದಿವೆ. ಕಳೆದ ಏಪ್ರಿಲ್‌ನಿಂದ ಇಂದಿನವರೆಗೂ ಬಹಳಷ್ಟು ಶಾಲೆಗಳು ಶಿಕ್ಷಕರಿಗೆ ಕೈಲಾದಷ್ಟು ವೇತನ ರೂಪದ ಸಹಾಯ ಧನ ನೀಡಿವೆ. ಇದರ ನಡುವೆ ಕೆಲ ಪಟ್ಟಭದ್ರ ಹಿತಾಸಕ್ತಿಯ ಶಾಲೆಗಳಲ್ಲಿ ರಜೆ ಅವಧಿಯಲ್ಲಿ ಶಿಕ್ಷಕರ ವೇತನಕ್ಕೆ ಕೊಕ್ಕೆ ಹಾಕಿರುವ, ಹಾಕುತ್ತಿರುವ ಘಟನೆಗಳನ್ನೂ ಸಹ ಇಲ್ಲಿ ಪರಿಗಣಿಸಬೇಕು.
ಡೋನೇಷನ್ ತೆಗೆದುಕೊಳ್ಳಬಾರದು ಎಂಬ ಸಾರ್ವಜನಿಕ ಅಭಿಪ್ರಾಯಕ್ಕೆ ಪೂರಕವಾಗಿ ಖಾಸಗಿ ಟಿವಿ ವಾಹಿನಿಗಳು ನಡೆಸಿದ ಕಾರ್ಯಕ್ರಮಗಳು ನಿಜಕ್ಕೂ ಮೆಚ್ಚಿಕೊಳ್ಳುವಂತಹವು ಇಂತಹ ವಿಷಯಕ್ಕೆ ಸಾರ್ವಜನಿಕ ವಲಯ ಸಾಮೂಹಿಕವಾಗಿ ಬೆಂಬಲಿಸುತ್ತದೆ. ಅದೇ ಬಗೆಯಲ್ಲಿ ಕೆಲವು ಶಾಲೆಗಳು ಈ ನಿಯಮಕ್ಕೆ ಪೂರಕವಾಗಿ ವರ್ತಿಸುತ್ತಿವೆ. ಆದರೆ ಕನಿಷ್ಠ ಶುಲ್ಕ ವಸೂಲಿ ಮಾಡುವ ಶಾಲೆಗಳಲ್ಲೂ ಸಹ ಅರ್ಧ ಶುಲ್ಕ ಪಡೆಯಿರಿ ಎಂದು ಹೇಳುವುದಾದರೆ ಶಾಲೆಗ ಳನ್ನು ನಡೆಸುವುದಾದರೂ ಹೇಗೆ.
ಗರಿಷ್ಟ ಲಕ್ಷದಿಂದ 50 ಸಾವಿರ ರೂಪಾಯಿ ಶುಲ್ಕ ಪಡೆಯುವ ಕೆಲವೇ ಕೆಲವು ಖಾಸಗಿ ಶಾಲೆಗಳ ಮುಂದೆ ಕನಿಷ್ಟ 10ರಿಂದ ಗರಿಷ್ಟ 20 ಸಾವಿರ ಶುಲ್ಕ ಪಡೆಯುವ ಶಾಲೆಗಳಲ್ಲಿನ ಶುಲ್ಕ ಅರ್ಧದಷ್ಟು ಮಾಡಿದರೆ ಹೇಗೆ ತಾನೇ ಶಿಕ್ಷಕರ ವೇತನವನ್ನು ನಿಭಾಯಿಸಲು ಸಾಧ್ಯ. ಹಿಂದೆ ಕೊಟ್ಟಿದ್ದ ವೇತನದಷ್ಟೆ ಹಣವನ್ನು ನೀಡುವುದಾದರೂ ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಲ್ಲವೇ.?
ಅನುದಾನ ರಹಿತ ಶಾಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿವರ್ಗ ಅಸಂಘಟಿತ ಕಾರ್ಮಿಕರಾಗಿದ್ದು, ಅವರ ಜೀವನ ನಿರ್ವಹಣೆಗೆ ಕನಿಷ್ಟ ವೇತನವಾದರೂ ಬೇಕಲ್ಲವೇ…? ಅದನ್ನು ಹೇಗೆ ತಾನೆ ಶಿಕ್ಷಣ ಸಂಸ್ಥೆ ನೀಡಲು ಸಾಧ್ಯ. ಅಂತಹ ಶಿಕ್ಷಕರ ವೇತನವನ್ನು ಅರ್ಧದಷ್ಟು ನೀಡಿದರೆ ಹೇಗೆ ತಾನೆ ಆ ಶಿಕ್ಷಕ ಮಕ್ಕಳ ಕಲಿಕೆಗೆ ಪೂರಕವಾಗಿ ಸ್ಪಂದಿಸಲು ಸಾಧ್ಯ..? ಹಾಗೆಯೇ ಆ ಶಿಕ್ಷಕನ ಅನಿವಾರ್ಯದ ಅನ್ಯ ದುಡಿಮೆಯ ಹಾದಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಘಾಸಿ ನೀಡುವುದಿಲ್ಲವೇ..?
ಕನಿಷ್ಠ ವೇತನ ನೀಡಬೇಕೆಂದು ಸೂಚಿಸುವ ಸರ್ಕಾರ ಇಂತಹ ಸಂದರ್ಭದಲ್ಲಿ ಶಿಕ್ಷಕರ ವೇತನದ ಒಂದಿಷ್ಟು ಪಾಲು ನೀಡಿದರೆ ಉತ್ತಮವಲ್ಲವೇ.? ಸರಾಸರಿ ಅನುಸಾರ ಮಕ್ಕಳ ಶಿಕ್ಷಣವನ್ನು ಉನ್ನತೀಕರಿಸುವ ಮೂಲಕ ಶಿಕ್ಷಕರ ಹಿತ ಕಾಪಾಡುವ ಮೂಲಕ ಅಗತ್ಯದ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ, ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಒತ್ತಾಯ.

ಪ್ರತಿ ಮಕ್ಕಳಿಗೂ ಗರಿಷ್ಟ ಶುಲ್ಕ 25 ಸಾವಿರ ಮೀರದಿರಲಿ. ಶಾಲೆಯ ಪ್ರತಿ ಮಕ್ಕಳಿಗೆ ಸರ್ಕಾರ ಈ ವರ್ಷ ಕನಿಷ್ಠ 10 ಸಾವಿರ ರೂಪಾಯಿ ಸಹಾಯ ಧನ ನೀಡಿದರೆ ಪೋಷಕರಿಗೆ 25 ಸಾವಿರದ ಹೊರೆ 15 ಸಾವಿರಕ್ಕೆ ಇಳಿಯುತ್ತದೆ. ಅದಕ್ಕಿಂತಲೂ ಹೆಚ್ಚು ಶುಲ್ಕ ಪಡೆಯುತ್ತಿರುವ ಶಾಲೆಗಳಲ್ಲಿ ಬೇಕಿದ್ದರೆ ಶೇ.50ರಷ್ಟು ಶುಲ್ಕ ಕಡಿತ ಮಾಡಲಿ ಈ ಗರಿಷ್ಟ 25ಸಾವಿರ ಶುಲ್ಕ ಇದ್ದಾಗ ಮಾತ್ರ ಎಲ್ಲಾ ಶಿಕ್ಷಕರ ವೇತನವನ್ನು ಸಮರ್ಪಕವಾಗಿ ನೀಡಬಹುದು. ಈ ವರ್ಷ ಶಿಕ್ಷಣ ಸಂಸ್ಥೆಗಳು ಇತರ ಚಟುವಟಿಕೆಗಳ ಆದ್ಯತೆಗಳನ್ನು ಬಿಟ್ಟು ಇತರ ಶುಲ್ಕ ವಸೂಲಾತಿಯನ್ನು ನಿಲ್ಲಿಸಬೇಕು. ಈ ಯೋಜನೆ ಬರುವ ಆಗಸ್ಟ್ ವೊಳಗೆ ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸಿದಾಗ ಶಿಕ್ಷಣ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಇಲ್ಲಿದಿದ್ದರೆ ಶಿಕ್ಷಕರನ್ನು ಕಡಿತಗೊಳಿಸುವುದು ಅನಿವಾರ್ಯವಾಗುತ್ತದೆ ಅಲ್ಲವೇ..?
-ಎಸ್.ಕೆ.ಶೇಷಾಚಲ, ಕಾರ್ಯದರ್ಶಿಗಳು
ವಾಸವಿ ವಿದ್ಯಾಸಂಸ್ಥೆ ಶಿವಮೊಗ್ಗ

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿವರ್ಗ ಅಸಂಘಟಿತ ಕಾರ್ಮಿಕರಾಗಿದ್ದು, ಇಂದಿನ ದಿನಮಾನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಆಡಳಿತ ಮಂಡಳಿ ನೀಡುವ ವೇತನದಿಂದ ಬದುಕು ಸಾಗಿಸಬೇಕಾಗಿದೆ. ಅವರಿಗೆ ಏಕಾಏಕಿ ಅರ್ಧ ಶುಲ್ಕ ಪಡೆಯಿರಿ ಎಂದರೆ ಹೇಗೆ ತಾನೇ ಶಿಕ್ಷಕರಿಗೆ ಸಮರ್ಪಕವಾಗಿ ವೇತನ ನೀಡಲು ಸಾಧ್ಯ. ಅರ್ಧ ಶುಲ್ಕ ಪಡೆಯುವುದಾದರೆ ಶಿಕ್ಷಕರಿಗೆ ಅರ್ಧವೇತನ ಕೊಡುವುದರಲ್ಲಿ ಅನುಮಾನವೇ ಇಲ್ಲ. ಸರ್ಕಾರದ ಯಾವುದೇ ಅನುದಾನ ಪಡೆಯದ ಈ ಸಂಸ್ಥೆಗಳಲ್ಲಿ ಮಕ್ಕಳ ಪ್ರವೇಶಾತಿಯ ಡೋನೆಷನ್ ಬಿಟ್ಟರೂ ಅರ್ಧ ಶುಲ್ಕ ನೀಡಬೇಕೆಂಬುದು ಸರಿಯಲ್ಲ. ಇಂತಹ ಯೋಜನೆ ಬಂದರೆ ಶಿಕ್ಷಕರು ಶಾಲೆ ಬಿಟ್ಟು ಗುದ್ದಲಿ ಹಿಡಿದು ಕಾರ್ಮಿಕರಾಗುತ್ತಾರೆ. ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ತಮ್ಮ ವೇತನವನ್ನು ಬಿಟ್ಟು ದೇಶದ ಸಂಕಷ್ಟತೆಗೆ ಸ್ಪಂದಿಸಲಿ ಸರ್ಕಾರ ಈ ಶಿಕ್ಷಕರ ಉಳುವಿಗೆ ಕ್ರಮಕೈಗೊಳ್ಳಲಿ.
-ರಾ.ಹ.ತಿಮ್ಮೇನಹಳ್ಳಿ, ಅಧ್ಯಕ್ಷರು, ಜಿಲ್ಲಾ ಅನುದಾನ ರಹಿತ
ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

error: Content is protected !!