ಎಸ್ಎಸ್ಎಲ್ ಸಿ ಪರೀಕ್ಷೆಗೆ ಮಾಜಿಸಚಿವ ಕಿಮ್ಮನೆ ಸಲಹೆ
ಶಿವಮೊಗ್ಗ,ಜೂ.11:
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿದೆ. ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಅಗತ್ಯ ಬಿದ್ದರೆ, ಮುಖ್ಯಪರೀಕ್ಷೆ ದಿನ ಬೆಳಿಗ್ಗೆ ಏಳರಿಂದ ಸಂಜೆ ನಾಲ್ಕರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ಸಲಹೆ ನೀಡಿದರು.
ಪತ್ರಿಕಾಭವನದಲ್ಲಿ ಇಂದು ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಕಳೆದ ಒಂದು ತಿಂಗಳ ಹಿಂದೆ ದೂರವಾಣಿ ಕರೆ ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದರ ಕುರಿತು ತಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದರು. ಆಗ ಕೂಡ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದ್ದೆ. ಈಗ ಕೂಡ ಅದೇ ಅಭಿಪ್ರಾಯವಿದೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದಕ್ಕೆ ಪೂರಕವಾಗಿ ಇದ್ದೇನೆ ಎಂದರು.
ರಾಜ್ಯದಲ್ಲಿ ಸುಮಾರು ಎಂಟು ಲಕ್ಷ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿದ್ದಾರೆ. ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಜೀವನದಲ್ಲಿ ತಿರುವು ನೀಡುತ್ತದೆ. ಹೀಗಾಗಿ ಪರೀಕ್ಷೆ ನಡೆಸುವುದು ಸೂಕ್ತ. ಪರೀಕ್ಷೆ ನಡೆಸದೆ ತೇರ್ಗಡೆ ಮಾಡುವುದು ವ್ಯಕ್ತಿಗತವಾಗಿ ಸಮ್ಮತ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸೆಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳು ತೀರಾ ಚಿಕ್ಕ ಮಕ್ಕಳಲ್ಲ. ಅವರಿಗೆ ತಿಳಿಸಿ ಹೇಳಿದರೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಾರೆ. ಕೋವಿಡ್-19 ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪೂರ್ವಸಿದ್ಧತೆ ಹಾಗೂ ಮುಂಜಾಗೃತ ಕ್ರಮಗಳ ಕುರಿತು ತಿಳಿಸಿ ಹೇಳಬೇಕಿದೆ. ಪರೀಕ್ಷೆ ನಡೆಸಬೆರಕು ಎಂದರು.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ದಿನದಂದು ಸಂಪೂರ್ಣ ಲಾಕ್ಡೌನ್ ಮಾಡಿದರೆ ಒಳಿತು. ಆ ವ್ಯವಸ್ಥೆಗೆ ನಾವು ಹೊಂದಿಕೊಂಡಿದ್ದೇವೆ. ಪರೀಕ್ಷೆ ನಡೆಯುವ ದಿನದಂದು ಬೆಳಗ್ಗೆ 7ರಿಂದ ಸಂಜೆ 4 ಗಂಟೆಯವರೆಗೆ ಜಾರಿ ಮಾಡಲಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ದೊಂದಿಗೆ ಪರೀಕ್ಷೆ ನಡೆಸಬೇಕು ಎಂದು ಹೇಳಿದರು.
ಕೋವಿಡ್-19 ನಿಂದ ಸಾವು ಎದುರು ನಿಂತಿದೆ, ಹಸಿವು ಇದೆ. ಹಸಿವು ಕ್ರೂರವಾಗಿದೆ. ಇದೆಲ್ಲವನ್ನು ಮೆಟ್ಟಿ ನಿಲ್ಲಬೇಕು. ಜೀವನ ಮೌಖ್ಯಾನೋ, ಶಿಕ್ಷಣ ಮುಖ್ಯಾನೋ ಎಂಬ ಪ್ರಶ್ನೆ ಎದುರಿದೆ. ಆದರೆ ಶಿಕ್ಷಣಕ್ಕಿಂತ ಜೀವನ ಮುಖ್ಯವಾಗುತ್ತದೆ. ಈ ಬಾರಿ ಕೆಲವು ಮಹಾತ್ಮರ ಜಯಂತಿ, ಶಾಲಾ ದಿನಾಚರಣೆ ಹಾಗೂ ಮುಂಬರುವ ಎಪ್ರಿಲ್-ಮೇ ತಿಂಗಳಿನ ದಿನಗಳನ್ನು ತರಗತಿಗೆ ಬಳಸಿಕೊಂಡರೆ ಶೈಕ್ಷಣಿಕ ಸಾಲನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಇದನ್ನು ಸರ್ಕಾರ ಗಮನಿಸಬೇಕು ಎಂದು ಸಲಹೆ ನೀಡಿದರು.
ಆನ್ಲೈನ್ ಪಾಠ ಬೇಡ: ಒಂದರಿಂದ ಏಳನೇ ತರಗತಿ ಮಕ್ಕಳಿಗೆ ಆನ್ಲೈನ್ನಲ್ಲಿ ಶಿಕ್ಷಣ ನೀಡಬಾರದು ಎಂದು ಸರ್ಕಾರ ಹೇಳಿದೆ. ಆದರೆ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಆನ್ಲೈನಲ್ಲಿ ಶಿಕ್ಷಣ ನೀಡುವುದನ್ನು ತಡೆಹಿಡಿಯಬೇಕು. ಗ್ರಾಮೀಣ ಭಾಗದಲ್ಲಿ, ಅರಣ್ಯ ಪ್ರದೇಶದಲ್ಲಿರುವ ಊರುಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಸರ್ಕಾರ ಶ್ರೀಮಂತರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಗಮನಹರಿಸಬೇಕು. ಹಲವರ ಬಳಿ ಇಂಟರ್ನೆಟ್, ಮೊಬೈಲ್, ಲ್ಯಾಪ್ಟಾಪ್ ಇಲ್ಲ. ಹೀಗಿರುವಾಗ ಆನ್ಲೈನ್ ಪಾಠ ಮಾಡುತ್ತೇವೆ ಎಂದರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಒಂದೇ ಭಾರತವನ್ನು ಕಟ್ಟುವುದಕ್ಕೆ ಮುಂದಾಗಬೇಕು ಹೊರತು, 3-4 ಭಾರತ ಕಟ್ಟಬಾರದು. ಶಿಕ್ಷಣ ಕೂಡ ಈ ನಿಟ್ಟಿನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಅತಂತ್ರ ಸ್ಥಿತಿ ನಿರ್ಮಾಣ ಮಾಡಬಾರದು. ಶಿಕ್ಷಣ ಸಚಿವರು ಇಲಾಖೆಯ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸಮರ್ಥರಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಮೂಲಸೌಕರ್ಯ ನೀಡಬೇಕು:
ಎಷ್ಟೊ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲವಾಗಿದೆ. ಬಜೆಟ್ ನಲ್ಲಿ ಸುಮಾರು 17 ರಿಂದ 18 ಸಾವಿರ ಕೋಟಿ ಶಿಕ್ಷಣಕ್ಕೆ ಮೀಸಲಿಟ್ಟರು ಮೂಲಸೌಕರ್ಯಕ್ಕೆ ದೊರಕುವ ಅನುದಾನ ಕಡಿಮೆ ಇದೆ. 14-15 ಸಾವಿರ ಕೋಟಿ ಶಿಕ್ಷಕರ ವೇತನಕ್ಕೆ ನೀಡಬೇಕಿದೆ. ಕೇವಲ 200 ಕೋಟಿ ರು. ದೊರಕಿದರೆ ಹೆಚ್ಚು ಎನ್ನುವಂತಾಗಿದೆ. ಇದರಿಂದ ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ. ಪ್ರತಿ ಜಿಲ್ಲೆಗೆ 80-100 ಕೋಟಿ ರು. ಬೇಕಿದೆ. ಆದರೆ ಇದುವರೆಗೆ ಯಾವ ಸರ್ಕಾರಕ್ಕೂ ಇಷ್ಟೊಂದು ಅನುದಾನ ನೀಡಲು ಸಾಧ್ಯವಾಗಿಲ್ಲ ಎಂದರು.
ಹಿಂದಿ ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಶಾಲೆಗಳ ಅಭಿವೃದ್ಧಿಗೆಂದು ಪ್ರತಿ ಶಾಸಕರಿಗೆ ತಲಾ 1ಕೋಟಿ ರೂ ನೀಡುವಂತೆ ಅಂದಿನ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದ್ಯತೆ ಮೇಲೆ ಶಾಸಕರಿಗೆ 40 ಲಕ್ಷ ರೂ ಬಿಡುಗಡೆ ಮಾಡಿತು. ಮೂಲಸೌಕರ್ಯ ನೀಡದ ಹೊರತು ಸುಧಾರಣೆ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ ಎಂದು ಹೇಳಿದರು.