ಟಿಕೇಟ್ ಘೋಷಣೆಗೂ ಮುನ್ನವೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಪಕ್ಷ ಸಂಘಟ ನೆಯಲ್ಲಿ ತೊಡಗಿಕೊಂಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂದು ಮುಂಜಾನೆ ಈಶ್ವರಪ್ಪನವರ ಮೊಬೈಲ್’ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಈ ಕಾರ್ಯ, ತ್ಯಾಗ ಇಡಿಯ ದೇಶಕ್ಕೇ ಮಾದರಿ. ದೇಶದಾದ್ಯಂತ ಕಾರ್ಯಕರ್ತರು ನಿಮ್ಮನ್ನು ನೋಡಿ ಕಲಿಯಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಗೆಲ್ಲಿಸಿ. ನಿಮ್ಮ ತ್ಯಾಗವನ್ನು ಪಕ್ಷ ಎಂದಿಗೂ ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷ ನಿಮ್ಮ ಹಾಗೂ ನಿಮ್ಮ ಕುಟುಂಬದ ಕೈ ಬಿಡುವುದಿಲ್ಲ. ನಿಮ್ಮ ರಾಜಕೀಯ ಭವಿಷ್ಯ ಉತ್ತಮವಾಗಿರುತ್ತದೆ. ನಿಮ್ಮ ನಡೆ ಸ್ವತಃ ನನಗೂ ಸಹ ಪ್ರೇರಣೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ನೀವು ಬಿ.ಎಸ್. ಯಡಿಯೂರಪ್ಪ ಪಕ್ಷಕ್ಕಾಗಿ ಕೆಲಸ ಮಾಡಿದ್ದೀರಿ. ಪಕ್ಷ ಸಂಘಟನೆ ನಿಮ್ಮ ಜೊತೆ ಯಾವಾ ಗಲೂ ಇರುತ್ತದೆ ಎಂದು ಮೋದಿ ತಿಳಿಸಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನೀವು ಪೋನ್ ಮಾಡಿದ್ದು ಖುಷಿ ಆಯ್ತು. ಶಿವಮೊಗ್ಗದಲ್ಲಿ ನಾವು ಗೆಲ್ಲುತ್ತೇವೆ. ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ನೀವು ಕರೆ ಮಾಡಿದ್ದು ಬಹಳ ಖುಷಿ ಆಗಿದೆ ಎಂದರು.
ಈ ವೇಳೆ ಶಿವಮೊಗ್ಗ ವಿಧಾನಸಭಾ ಚುನಾ ವಣೆಯ ಬಗ್ಗೆ ಚರ್ಚೆ ನಡೆಸಿದ್ದು, ಈ ವೇಳೆ ಈಶ್ವರಪ್ಪ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಂದಿಗೆ ಈ ರೀತಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಸಂಘಟನೆ ಹಾಗೂ ನಿಮ್ಮನೊಂದಿಗೆ ಸದಾ ನಾನು ಇರುತ್ತೇನೆ ಎಂದು ಈಶ್ವರಪ್ಪ ತಿಳಿಸಿದರು.