ನನಗೆ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೇಟ್ ಘೋಷಣೆಯಾಗುವ ಆಶಾ ಭಾವನೆಯಿದ್ದು, ನನಗೆ ಅವಕಾಶ ಕೊಟ್ಟರೂ, ಕೊಡದೇ ಇದ್ದರೂ ಸಾಯುವವರೆಗೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್ ಹೇಳಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಯಾದ ನಂತರ ಮಾತನಾಡಿದ ಅವರು, ಆರ್’ ಎಸ್’ಎಸ್ ಹಾಗೂ ಬಿಜೆಪಿ ನಮ್ಮ ಕುಟುಂಬ ವನ್ನು ಸಂಸ್ಕಾರಯುತವಾಗಿ ಬೆಳೆಸಿದೆ. ಪಕ್ಷ ನಮ್ಮ ತಾಯಿಯಿದ್ದಂತೆ ಎಂದು ಮೊದಲಿನಿಂದಲೂ ನಮ್ಮ ತಂದೆ ಹೇಳಿಕೊಟ್ಟಿದ್ದಾರೆ. ಪಕ್ಷ ನಮ್ಮನ್ನು ಎಂದಿಗೂ ಕೈ ಬಿಟ್ಟಿಲ್ಲ. ಬಿಡುವುದಿಲ್ಲ ಎಂಬ ನಂಬಿಕೆಯೂ ಸಹ ಇದೆ ಎಂದಿದ್ದಾರೆ.
ನನಗೆ ಸಂಪೂರ್ಣವಾದ ನಂಬಿಕೆ ಇದ್ದು, ಮುಂದಿನ ದಿನಗಳಲ್ಲಿ ಒಳ್ಳೇದಾಗಲಿದೆ. ಪಕ್ಷ ನಮ್ಮ ಕೈ ಬಿಡಲ್ಲ. ನನಗೆ ಒಂದು ಅವಕಾಶ ಸಿಗುವ ನಂಬಿಕೆಯಲ್ಲಿ ನಾನು ಇದ್ದೀನಿ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಹಾಗೂ ನಮ್ಮ ಕುಟುಂಬ ಎಂದಿಗೂ ಬದ್ಧರಾಗಿದ್ದೇವೆ ಎಂದರು.
ಪಕ್ಷ ನಮ್ಮ ಕುಟುಂಬಕ್ಕೆ ಬಹಳಷ್ಟು ಅವಕಾಶ ನೀಡಿದೆ. ನನ್ನನ್ನು ಜಿಲ್ಲಾ ಪಂಚಾಯ್ತಿ ಸದಸ್ಯನನ್ನಾಗಿ ಮಾಡಿದೆ. ಪಕ್ಷದಲ್ಲೂ ಸಹ ಬಹಳಷ್ಟು ಅವಕಾಶ ನೀಡಿದೆ. ಅಂತೆಯೇ. ನಮ್ಮಂತೆಯೇ ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ, ವರಿಷ್ಠರು ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆಯಿದೆ.
ಸಾವಿರಾರು ಕಾರ್ಯಕರ್ತರಿಗೆ ನಮ್ಮ ತಂದೆ ಮಾದರಿಯಾಗಿದ್ದು, ಪಕ್ಷ ಟಿಕೆಟ್ ಕೊಡದಿದ್ದರೆ ಅದಕ್ಕೂ ಬದ್ದಯಾಗಿರುತ್ತೇನೆ. ಸಾಯೋವರೆಗೂ ಪಕ್ಷದ ತೀರ್ಮಾನಕ್ಕೆ ಬದ್ದನಾಗಿ ದುಡಿಯುತ್ತೇನೆ. ಮುಂದಿನ ದಿನಗಳಲ್ಲಿ ಒಳ್ಳೇದಾಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ ಎಂದರು.
ಆಯನೂರು ಮಂಜುನಾಥ್ ಎಲ್ಲೂ ಹೋಗಲ್ಲ. ಅವರು ಬಿಜೆಪಿಯಲ್ಲೇ ಉಳಿಯುತ್ತಾರೆ. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಆಯನೂರು ಬೆಂಬಲಿಸುತ್ತಾರೆ ಎಂದರು.