ಶಿವಮೊಗ್ಗ: ಕರುನಾಡ ರಾಜ್ಯ ವನ್ನಿಯಾರ್ ಮಹಾಸಭಾ, ಮಹಿಳಾ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಏ.9 ರಂದು ಬೆಳಿಗ್ಗೆ 10 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಶ್ರೀ ವೀರರುದ್ರ ವನ್ನಿ ಮಹಾರಾಜರ ಜಯಂತಿ ಹಾಗೂ ಮಹಾಸಭಾದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಸಂಸ್ಥಾಪನ ಜಿ.ವಿ.ಗಣೇಶಪ್ಪ ಹೇಳಿದರು.
ಅವರು ಇಂದು ಪ್ರೆಸ್ಟ್ರಸ್ಟ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೆರಿಯಾಕುಲಂನ ಶ್ರೀಲಾಶ್ರೀ ಶಿವಗುರು ಕ್ಷತ್ರೀಯ ರಾಜಶ್ರೀ ಓಂ ಅನ್ಬುಸೆಲ್ವರು ಮಹರ್ಷಿ ಸಂಜೀವ ಸಿದ್ದರ್ ಸಾನಿಧ್ಯ ವಹಿಸಲಿದ್ದು, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಎಸ್.ಭೂಮರೆಡ್ಡಿ, ತಮಿಳುನಾಡಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಡಾ.ಆರ್.ಸಿ.ತಮಿಳ್ಸೆಲ್ವಿ, ತುಮಕೂರಿನ ಸರ್ಕಾರಿ ಅಭಿಯೋಜಕರಾದ ಬಿ.ಕೆ.ನಾಗರತ್ನಮ್ಮ, ಪ್ರಮುಖರಾದ ರಮಣಿ, ಮಣಿಕಂದನ್ ಜಗದೀಶ್, ತೋಟಕರ್ ಕೆ. ಕೇಶವಮೂರ್ತಿ ಮುಂತಾದವರು ಉಪಸ್ಥಿತರಿರುವರು ಎಂದರು.
ಪ್ರತ್ಯೇಕ ನಿಗಮಕ್ಕೆ ಆಗ್ರಹ: ರಾಜ್ಯ ಸರ್ಕಾರ ತಿಗಳ ಸಮುದಾಯ ಅಭಿವೃದ್ಧಿ ನಿಗಮಮಂಡಳಿಯನ್ನು ರಚಿಸಿದೆ. ಅದರೊಳಗೆ ವನ್ನಿಯಾರ್ ಸಮುದಾಯಗಳನ್ನು ಸೇರಿಸಿದೆ. ಆದರೆ ವನ್ನಿಯಾರ್ ಸಮುದಾಯಗಳಿಗೂ ತಿಗಳ ಸಮುದಾಯಗಳಿಗೂ ಯಾವುದೇ ಸಂಬಂಧವಿಲ್ಲ. ಇವೆರೆಡು ಬೇರೆ ಬೇರೆ. ಆದ್ದರಿಂದ ರಾಜ್ಯ ಸರ್ಕಾರ ವನ್ನಿಯಾರ್ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಮಂಡಳಿಯನ್ನು ರಚಿಸಬೇಕು. ವನ್ನಿಯಾರ್ ಸಮುದಾಯಗಳಿಗೆ ವನ್ನಿ ಗೌಂಡರ್, ಗೌಂಡರ್, ಕಂದಾರ್, ಪಡಿಯಾಚಿ, ಪಲ್ಲಿ, ವನ್ನಿರೆಡ್ಡಿ, ನಾಯ್ಕರ್ ಎಂಬ ಸಮುದಾಯಗಳು ಸೇರುತ್ತವೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಇವುಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಅಷ್ಟೆ ಎಂದರು.
ತಿಗಳ ಸಮಾಜದವರು ಕೆಲವೇ ಜಿಲ್ಲೆಗಳಲ್ಲಿ ಇದ್ದಾರೆ. ಆದರೆ ವನ್ನಿಯಾರ್ ಸಮುದಾಯದವರು ಎಲ್ಲಾ ಜಿಲ್ಲೆಗಳಲ್ಲಿ ಇದ್ದಾರೆ. ರಾಜ್ಯದಲ್ಲಿ ಸುಮಾರು 40ಲಕ್ಷ ಜನರಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಒಂದು ಲಕ್ಷ ಜನರಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ವನ್ನಿಯಾರ್ ಹೆಸರಿನಲ್ಲಿ ಪ್ರತ್ಯೇಕ ನಿಗಮಮಂಡಳಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಪರಶುರಾಮ್, ಪ್ರಧಾನ ಕಾರ್ಯದರ್ಶಿ ಜೆ.ಪಿಚಂದ್ರು, ಖಜಾಂಚಿ ವಿ.ಮುರುಗೇಶ್, ಉಪಾಧ್ಯಕ್ಷ ಸುಬ್ರಹ್ಮಣಿ, ಆರ್ಮುಗಗಂ ಮುಂತಾದವರಿದ್ದರು.