ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಅಭಿಪ್ರಾಯವನ್ನು ಕೂಡ ಪಕ್ಷ ಗಮನಿಸುತ್ತಿದ್ದು, ಈ ಬಗ್ಗೆ ವರಿಷ್ಠರಿಗೆ ವರದಿ ಸಲ್ಲಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯನೂರು ಮಂಜುನಾಥ್ ಅವರ ಹೇಳಿಕೆ ಮತ್ತು ಅಭಿಪ್ರಾಯಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. ಸ್ಪಷ್ಟವಾದ ವರದಿ ಕಳಿಸಿದ್ದೇವೆ. ಶಿಸ್ತು ಕ್ರಮದ ಬಗ್ಗೆ  ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ನಿರಂತರ ಪ್ರಕ್ರಿಯೆ. ಸರಿದಾರಿಗೆ ತರುವ ಕೆಲಸ ಆಗುತ್ತದೆ. ನಾವು ಜೋಡಿಸುವುದಕ್ಕೆ ಕೂತಿದ್ದೇವೆ. ಪಕ್ಷವನ್ನು ಒಡೆಯಲು ಅಲ್ಲ. ಅತ್ಯಂತ ದೊಡ್ಡ ಪಕ್ಷ ಬಿಜೆಪಿ 20 ಕೋಟಿ ಸದಸ್ಯರನ್ನು ಹೊಂದಿದೆ. ಇಂತಹ ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿರಬಹುದು. ಅದನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ ಎಂದರು.

ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅದರದೇ ಆದ ಮಾನದಂಡವಿದೆ. ಪಕ್ಷದ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಅವರ ಭಾಗವಹಿಸುವಿಕೆ ಮತ್ತು ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಕೊಡುಗೆ ಗಮನಿಸಿ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತದೆ. ಪಕ್ಷದ ಘನತೆ, ಗೌರವಕ್ಕೆ ಧಕ್ಕೆ ತರುವ ಘಟನೆಗಳನ್ನು ಯಾರು ಕೂಡ ಮಾಡಬಾರದು. ಸೊರಬ ಕ್ಷೇತ್ರದಲ್ಲಿ ಕೂಡ ಕೆಲವು ಹಿರಿಯರ ಅಭಿಪ್ರಾಯಗಳನ್ನು ಗಮನಿಸಿದ್ದೇವೆ. ಈಗಾಗಲೇ ರಾಜ್ಯಾಧ್ಯಕ್ಷರು ಮಾತುಕತೆ ಮಾಡಿದ್ದಾರೆ. ಅಲ್ಲಿ ಕೂಡ ಸಮಸ್ಯೆಯನ್ನು  ಹಿರಿಯ ನಾಯಕರು ಬಗೆಹರಿಸುತ್ತಾರೆ ಎಂದರು.

ಮೋದಿ ಸರ್ಕಾರದ ಸಾಧನೆ, ವರ್ಚಸ್ಸು ಮತ್ತು ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಬೆಂಬಲ ನೀಡಲಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ಇ. ಕಾಂತೇಶ್, ಶಿವರಾಜ್, ಜ್ಞಾನೇಶ್ವರ್, ರಾಮಣ್ಣ, ಹೃಷಿಕೇಶ್ ಪೈ. ಇ. ವಿಶ್ವಾಸ್, ಅಣ್ಣಪ್ಪ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!