ಶಿವಮೊಗ್ಗ. ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರರಾದ ಪ್ರಶಾಂತ್ ಮಾಡಾಳ್ ಸೇರಿ ಐವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ 7.62 ಕೋಟಿ ರೂ. ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಕೂಡಲೇ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ ಹಾಗೂ ಮುಖ್ಯಮಂತ್ರಿ ಮೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಶಿವಪ್ಪ ನಾಯಕ ವೃತ್ತದಿಂದ ಗೋಪಿವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. 

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ದೇಶ ಉಳಿಯಬೇಕಾದರೆ ಮೊದಲು ಮೋದಿ ಮತ್ತು ಅಮಿತ್ ಶಾ ಮನೆಗೆ ಹೋಗಬೇಕು. ಮಾತ್ತೆತ್ತಿದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ವಿಷಬೀಜ ಬಿತ್ತುವ ಬಿಜೆಪಿಗರ ನಾಟಕವನ್ನು ಜನ ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಯಾವ ಕಂಟ್ರಾಕ್ಟರ್ಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಮತದಾರರು ಪ್ರಬುದ್ಧತೆಯನ್ನು ಮೆರೆಯಬೇಕಾಗಿದೆ ಎಂದರು. 

ಬಿಜೆಪಿಗರು ದೇಶವನ್ನೇ ಕೊಳ್ಳೆ ಹೊಡೆದಿದ್ದು, ತಮ್ಮ ಮರಿಮಕ್ಕಳಿಗೆ ಮತ್ತು ಅವರ ಮರಿಮಕ್ಕಳಿಗೂ ಆಗುವಷ್ಟು ಆಸ್ತಿ ಮಾಡಿದ್ದಾರೆ. ಬಡವರಿಗೆ ಸಬ್ಸಿಡಿ ಕೊಟ್ಟರೆ ಉರಿದು ಬೀಳುವ ಬಿಜೆಪಿಗರು. ಅಧಿಕಾರಕ್ಕೆ ಬಂದಾಗ ರೈತರ ಸಾಲಮನ್ನಾ ಮಾಡಿಲ್ಲ. ನೋಟ್ ಪ್ರಿಂಟ್ ಮಾಡುವ ಮಷಿನ್ ಇಟ್ಟುಕೊಂಡಿಲ್ಲ ಎಂದಿದ್ದರು.  ಬಡವರ ತೆರಿಗೆ ಹಣವನ್ನೆಲ್ಲ ಬಿಜೆಪಿಯ ಭ್ರಷ್ಟರು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. 

ಕೆಪಿಸಿಸಿ ಉಪಾಧ್ಯಕ್ಷ ಮಧುಬಂಗಾರಪ್ಪ ಮಾತನಾಡಿ, ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ ಎಂದು ಸಾಬೀತಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬಣ್ಣ ಬಯಲಾಗಿದ್ದು, ಇನ್ನು ಏನಿದ್ದರೂ ಕೇವಲ 10 ದಿನವಷ್ಟೆ ಬಿಜೆಪಿ ಮುಖ್ಯಮಂತ್ರಿ ಇರುತ್ತಾರೆ. ಪ್ರತಿ ಕ್ಷೇತ್ರದಲ್ಲೂ ಮತದಾರರಿಗೆ ಹಂಚಲು ಕಳ್ಳತನದ ದುಡ್ಡು ಶೇಖರಿಸಿಟ್ಟಿದ್ದು, ನಿನ್ನೆ ಮಾಡಾಳ್ ಪುತ್ರನ ಮನೆಯಲ್ಲಿ ಸಿಕ್ಕಿದ್ದು, ಕೇವಲ ಸ್ಯಾಂಪಲ್ ಅಷ್ಟೆ. ಬಿಜೆಪಿಯ ಭ್ರಷ್ಟತನವನ್ನು ಮನೆ ಮನೆ ಬಾಗಿಲಿಗೆ ಕಾಂಗ್ರೆಸ್ ಕಾರ್ಯಕರ್ತರು ಕೊಂಡೊಯ್ದು ಮತದಾರರಿಗೆ ತಿಳಿಸಬೇಕಾಗಿದೆ ಎಂದರು. 

ಕಳ್ಳತನ ಮಾಡಿದವರಿಗೆ ಜನ ತಕ್ಕ ಶಿಕ್ಷೆ ಕೊಡುತ್ತಾರೆ. ಬರಿ ಸೋಪ್ ಫ್ಯಾಕ್ಟರಿಯ ಅಧ್ಯಕ್ಷನೇ ಇಷ್ಟೊಂದು ಲೂಟಿ ಮಾಡಿದ್ದಾರೆ ಎಂದರೆ ಇನ್ನು ಮಂತ್ರಿ ಮಹನೀಯರುಗಳು ಕರ್ನಾಟಕವನ್ನು ಎಷ್ಟೊಂದು ಪ್ರಮಾಣದಲ್ಲಿ ಲೂಟಿ ಮಾಡಿರಬಹುದು. ಕಾಂಗ್ರೆಸ್ ಕಾರ್ಯಕರ್ತರು ಎದೆಯೊಡ್ಡಿ ನಿಂತರೆ ಬಿಜೆಪಿಯ ಬುಲೆಟ್ಗಳೆಲ್ಲ ಖಾಲಿಯಾಗಲಿದೆ. ಇವರು ಜನರ ದುಡ್ಡು ಲೂಟಿ ಮಾಡಿದ್ದಾರೆ. ಮನೆ ಬಾಗಿಲಿಗೆ ಬಂದರೆ ಬಿಜೆಪಿಯವರನ್ನು ಬಿಡಬೇಡಿ ಎಂದರು. 

 ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್, ಆರ್.ಪ್ರಸನ್ನ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಪ್ರಮುಖರಾದ ಕಲಗೋಡು ರತ್ನಾಕರ್, ರವಿಕುಮಾರ್, ಶ್ರೀನಿವಾಸ ಕರಿಯಣ್ಣ, ವೈ.ಹೆಚ್.ನಾಗರಾಜ್, ಎಸ್.ಪಿ.ದಿನೇಶ್, ರಮೇಶ ಶಂಕರಘಟ್ಟ, ಜಿ.ಡಿ. ಮಂಜುನಾಥ್, ಇಸ್ಮಾಯಿಲ್ ಖಾನ್, ತೀ.ನಾ.ಶ್ರೀನಿವಾಸ್, ರೇಖಾ ರಂಗನಾಥ್, ಚಂದ್ರ ಭೂಪಾಲ್, ಅನಿತಾ ಕುಮಾರಿ, ಪಲ್ಲವಿ, ನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು, ಕಾರ್ಯಕರ್ತರು ಮತ್ತಿತರರಿದ್ದರು. 

By admin

ನಿಮ್ಮದೊಂದು ಉತ್ತರ

error: Content is protected !!