ಶಿವಮೊಗ್ಗ: ಕಾಂಗ್ರೆಸ್ ನ ಮಹತ್ವಾಕಾಂಕ್ಷಿ ಪ್ರಣಾಳಿಕೆಯಾದ ಗ್ಯಾರಂಟಿ ಕಾರ್ಡ್ ವಿತರಣೆಯನ್ನು ಕಾಂಗ್ರೆಸ್ ಮುಖಂಡರು ಇಂದು ಬಾಪೂಜಿ ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಮನೆ ಮನೆಗೆ ತಲುಪಿಸಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.

ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಬಡವರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡಲಾಗುವುದು. ಕುಟುಂಬ ನಿರ್ವಹಣೆ ಮಾಡುವ ಕುಟುಂಬದ ಹೆಣ್ಣು ಮಕ್ಕಳಿಗೆ ತಿಂಗಳಿಗೆ 2 ಸಾವಿರ ರೂ. ನೆರವು ನೀಡಲಾಗುವುದು. ಹಾಗೂ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ನೀಡಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ಹಿಂದೆ ಸಿದ್ಧರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದಾಗ ಅನೇಕ ಜನಪರ ಯೋಜನೆ ಜಾರಿಗೆ ತರಲಾಗಿದೆ. ಬಿಜೆಪಿ ಸರ್ಕಾರ ಬಡವರನ್ನು ಕಡೆಗಣಿಸಿದೆ. ಶಾಸಕ ಕೆ.ಎಸ್. ಈಶ್ವರಪ್ಪ ಅವರ ಅವಧಿಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಜನರ ಹೇಳುತ್ತಿದ್ದಾರೆ. ಈಶ್ವರಪ್ಪನವರೇ ಮುಂದಿನ ಬಾರಿಯೂ ಚುನಾವಣೆಗೆ ನಿಲ್ಲಬೇಕು. ಏಕೆಂದರೆ ಅವರನ್ನು ಸೋಲಿಸಲು ಜನರೇ ಸಿದ್ಧರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಕೆ. ಮರಿಯಪ್ಪ, ಪಿ.ಒ. ಶಿವಕುಮಾರ್, ಹೆಚ್.ಸಿ. ಯೋಗೀಶ್, ದೀಪಕ್ ಸಿಂಗ್, ಅಕ್ರಂ ಪಾಷ, ಆಸೀಫ್, ಮುಜೀಬ್, ಅಣ್ಣಪ್ಪ ಮೊದಲಾದವರಿದ್ದರು.