Click
ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಅವರಿಗೆ ಶಿವಮೊಗ್ಗದಲ್ಲಿ ಟಿಕೆಟ್ ಸಿಗುವುದೇ ಅನುಮಾನ. ಇನ್ನು ಸಿದ್ದರಾಮಯ್ಯ ಅವರನ್ನು ಸೋಲಿಸುವ ಮಾತೆಲ್ಲಿ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಟೀಕಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪ ಅವರಿಗೆ ಸಿದ್ದರಾಮಯ್ಯ ಅವರ ಜಪ ಮಾಡದೆ ಹೋದರೆ ನಿದ್ದೆಯೇ ಬರುವುದಿಲ್ಲ. ಅವರನ್ನು ಟೀಕಿಸಿದರೆ ಮಾತ್ರ ತಮಗೆ ಟಿಕೆಟ್ ಸಿಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಿದೆ ಎಂಬ ಕೀರ್ತಿ ನನಗೆ ಬರುತ್ತದೆ ಎಂದು ಮಾತನಾಡುತ್ತಿದ್ದಾರೆ. ಇದೇ ಅಹಂಕಾರ ಅವರನ್ನು ರಾಜಕಾರಣದಿಂದಲೇ ದೂರ ಮಾಡುತ್ತದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಎಂಬಂತೆ ತಮಗೆ ಟಿಕಟ್ ಸಿಗುವುದಕ್ಕೆ ಮುಂಚೆಯೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತೇನೆ ಎಂದು ಹೇಳಿರುವುದು ವಿಪರ್ಯಾಸ ಎಂದರು.

ಹಿಂದು ಭಕ್ತನೊಬ್ಬ ಮೃತಪಟ್ಟರೆ ಶಿವಮೊಗ್ಗದ ಬಿಜೆಪಿಯವರೆಲ್ಲ ಸೇರಿಕೊಂಡು ಸರ್ಕಾರಕ್ಕೆ ಒತ್ತಡ ತಂದು ಕೋಟಿಗಟ್ಟಲೆ ಪರಿಹಾರ ಕೊಡಿಸುತ್ತಾರೆ. ತಪ್ಪು ಎಂದಲ್ಲ. ಆದರೆ ಮೋದಿ ಭಕ್ತನೊಬ್ಬ ಸತ್ತರೆ ತಿರುಗಿಯೂ ನೋಡದೆ ಇರುವುದು ಖಂಡನೀಯ. ಮೋದಿಯ ಕಾರ್ಯಕ್ರಮದಲ್ಲಿ ದೂರದ ಊರಿನಿಂದ ಬಂದ ಭಕ್ತನೊಬ್ಬ ನೀರೂ ಸಿಗದೆ ಮೃತಪಟ್ಟಿರುವುದು ದುರದೃಷ್ಟಕರ. ಆದರೆ ಈ ಬಿಜೆಪಿಯವರು ಕೊನೇ ಪಕ್ಷ ಆತನ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಿಲ್ಲ. ಈಗಲೂ ಕಾಲ ಮಿಂಚಿಲ್ಲ. ಜಿಲ್ಲಾಡಳಿತ ಆತನ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು. ಜಿಲ್ಲಾ ಬಿಜೆಪಿಯ ನಾಯಕರು ಒಂದು ಕೋಟಿಯನ್ನಾದರೂ ಸಂಗ್ರಹಿಸಿ ನೀಡಬೇಕು ಎಂದು ಒತ್ತಾಯಿಸಿದರು.

ಮೋದಿಯವರು ವಿಮಾನ ನಿಲ್ದಾಣ ಉದ್ಘಾಟನೆಯ ಹೆಸರಿನಲ್ಲಿ ಬಂದು ಬಿಜೆಪಿಯ ಪ್ರಚಾರವನ್ನು ಅಪ್ರತ್ಯಕ್ಷವಾಗಿ ಮಾಡಿದ್ದಾರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಏನನ್ನೂ ಹೇಳಲಿಲ್ಲ. ನಮ್ಮ ಜಿಲ್ಲೆಯ ಬಿಜೆಪಿ ನಾಯಕರುಗಳು ವಿಐಎಸ್ಎಲ್ ಕಾರ್ಖಾನೆಯಾಗಲಿ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನಾಗಲಿ, ಅಡಿಕೆ ಬೆಳಗಾರ ಸಮಸ್ಯೆಯನ್ನಾಗಲಿ ಪ್ರಧಾನಿಯ ಗಮನ ಸೆಳೆಯಲು ವಿಫಲರಾಗಿದ್ದಾರೆ. ಪ್ರಧಾನಿಯವರು ಜಿಲ್ಲೆಯನ್ನು ಒಂದಿಷ್ಟು ಹೊಗಳಿ ಹೋದರಷ್ಟೆ. ಕೋಟ್ಯಂತರ ರೂ. ಖರ್ಚು ಮಾಡಿ ಕಾರ್ಯಕ್ರಮ ಮಾಡುವ ಬದಲು ಸರಳವಾಗಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಬಹುದಿತ್ತು ಎಂದರು.

ದೈವಭಕ್ತ ಎಂದು ಹೇಳಿಕೊಳ್ಳುವ ಈಶ್ವರಪ್ಪನವರು ನಗರದ ರಾಗಿಗುಡ್ಡದಲ್ಲಿರುವ ಬ್ರಹ್ಮ,ವಿಷ್ಣು, ಮಹೇಶ್ವರ ದೇವಾಲಯವನ್ನು ನೆಲಸಮ ಮಾಡಿಸಿದ್ದಾರೆ. ಅಲ್ಲಿ ಪೂಜೆ ಮಾಡುತ್ತಿದ್ದ ಕುಟುಂಬವನ್ನು ಬೀದಿಗೆ ತಂದಿದ್ದಾರೆ. ಜೀವಸಂಕುಲವಾಗಿದ್ದ ರಾಗಿಗುಡ್ಡವನ್ನು ಅಭಿವೃದ್ಧಿಯ ಹೆಸರಲ್ಲಿ ವಿನಾಶ ಮಾಡಲು ಹೊರಟಿದ್ದಾರೆ. ಶಿವಲಿಂಗಮೂರ್ತಿಯನ್ನು ಸ್ಥಾಪಿಸುತ್ತೆವೆ ಎಂದು ಹೇಳುತ್ತಾ ಅಲ್ಲಿರುವ ರಾಮ, ಲಕ್ಷ್ಮಣ. ಸೀತೆ, ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಗಳನ್ನೆಲ್ಲಾ ಅನಾಥ ಮಾಡಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕೂಡ ಅಲ್ಲಿ ಐಶಾರಾಮಿ ತಾಣ ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಹೆಸರಿನಲ್ಲಿ ಗುಡ್ಡವನ್ನೇ ಬುಡಮೇಲು ಮಾಡುತ್ತಿದ್ದಾರೆ. ದೇವರು ಅವರನ್ನು ಕ್ಷಮಿಸುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಪಿ. ದಿವಾಕರ್, ರುದ್ರೇಶ್ ಇದ್ದರು.