ಬಿಜೆಪಿ ಸರ್ಕಾರದ ಬಂಡವಾಳವನ್ನು ಬಯಲು ಮಾಡಲು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದು, ಫೆ.೮ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ತಂಡ ಜಿಲ್ಲೆಯ ಭದ್ರಾವತಿ ಮತ್ತು ತೀರ್ಥಹಳ್ಳಿಗೆ ಆಗಮಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ನಾಳೆ ಬೆಳಿಗ್ಗೆ ೧೧-೩೦ಕ್ಕೆ ಡಿ.ಕೆ. ಶಿವಕುಮಾರ್ ಅವರು ಭದ್ರಾವತಿಗೆ ಆಗಮಿಸಲಿದ್ದಾರೆ. ಅಲ್ಲಿನ ಕನಕ ಮಂಟಪದಲ್ಲಿ ಬಹಿರಂಗ ಸಭೆ ಇರುತ್ತದೆ. ನಂUತರ ವಿಐಎಸ್‌ಎಲ್ ಕಾರ್ಖಾನೆ ಉಳಿಸಿ ಹೋರಾಟದಲ್ಲಿ ಮೃತಪಟ್ಟ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ.ಮತ್ತು ಪ್ರತಿಭಟನಾ ಸ್ಥಳಕ್ಕೂ ಭೇಟಿ ನೀಡಿ ಕಾರ್ಖಾನೆ ಉಳಿಸುವತ್ತ ಕಾರ್ಮಿಕರ ಜತೆ ಮಾತನಾಡಲಿದ್ದಾರೆ ಎಂದರು.
ನಂತರ ೪-೩೦ಕ್ಕೆ ತೀರ್ಥಹಳ್ಳಿಗೆ ಆಗಮಿಸಲಿದ್ದು, ಬಹಿರಂಗ ಸಭೆಯಲ್ಲಿ ಮಾತನಾಡುವರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಫಲ್ಯವನ್ನು ಜನರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುವುದು ಹಾಗೂ ಸಂಸಾರವನ್ನು ತೂಗಿಸುವ ಮಹಿಳೆಗೆ ಪ್ರತಿ ತಿಂಗಳು ೨೦೦೦ ರೂ. ನೀಡುವ ಬಗ್ಗೆ ಮಾತನಾಡುವರು. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ತಪ್ಪು ನಿರ್ಧಾರಗಳಿಂದ ಅನೇಕ ಜೀವಗಳು ಬಲಿಯಾಗುತ್ತಿವೆ. ಕೋಮು ಗಲಭೆ ನಡೆದಿದೆ. ಈ ಎಲ್ಲಾ ವಿಚಾರಗಳನ್ನು ಸಭೆಯಲ್ಲಿ ಮಾತನಾಡುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ. ಶ್ರೀನಿವಾಸ ಕರಿಯಣ್ಣ, ಶಂಕರಘಟ್ಟ ರಮೇಶ್, ಬಲದೇವಕೃಷ್ಣ, ಎಸ್.ಪಿ. ಶೇಷಾದ್ರಿ, ಚಂದ್ರಶೇಖರ್, ಟಿ.ಎನ್. ಶಶಿಧರ್, ಗಂಗಾಧರ್ ಸೇರಿದಂತೆ ಹಲವರಿದ್ದರು.