ಬಡವರಿಗೆ ಮನೆಗಳನ್ನು ಹಂಚುವುದು ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಹೊರವಲಯದಲ್ಲಿರುವ ಗೋವಿಂದಾಪುರದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ೩ ಸಾವಿರ ಮನೆಗಳಲ್ಲಿ ಒಂದನೇ ಹಂತವಾಗಿ ಸಂಪೂರ್ಣ ವಂತಿಕೆ ಹಣ ಪಾವತಿಸಿದ ಹಾಗೂ ಬ್ಯಾಂಕಿನಿಂದ ಸಂಪೂರ್ಣ ಸಾಲ ಮಂಜೂರಾತಿಯಾದ ಫಲಾನುಭವಿಗಳಿಗೆ ಹಾಗೂ ಅರ್ಹ ೬೨೦ ಫಲಾನುಭವಿಗಳಿಗೆ ಲಾಟರಿ ಮೂಲಕ ಗುಂಪು ಮನೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.


ನನ್ನ ತಾಯಿ ಅಡಿಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಆತ್ಮಕ್ಕೆ ಈ ವಸತಿ ಹಂಚಿಕೆ ಕಾರ್ಯ ಶಾಂತಿ ತಂದಿರಬಹುದು ಎಂದು ಭಾವಿಸುತ್ತೇನೆ. ಈಗ ೬೨೦ ಮನೆಗಳು ಸಿದ್ಧವಾಗಿದ್ದು, ಲಾಟರಿ ಮೂಲಕ ಹಂಚಿಕೆ ಪ್ರಕ್ರಿಯೆ ಇಂದು ನಡೆಸಲಾಗಿದೆ. ಫೆ.೮ ರಂದು ಮುಖ್ಯಮಂತ್ರಿಗಳು ಎನ್‌ಇಎಸ್ ಮೈದಾನದಲ್ಲಿ ಅಷ್ಟು ೬೨೦ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಿದ್ದಾರೆ ಎಂದರು.


.ಬ್ಯಾಂಕ್ ಸಾಲ ಲಭ್ಯಗೊಂಡು ಅವರೊಂದಿಗೆ ಅಗ್ರಿಮೆಂಟ್ ಆದ ತಿಂಗಳಿಂದಲೇ ಮಾಸಿಕ ಕಂತು ಕಟ್ಟಲು ಪ್ರಾರಂಭವಾಗುತ್ತದೆ. ಉಳಿದ ಮನೆಗಳ ನಿರ್ಮಾಣ ಕಾರ್ಯ ಕೂಡ ವೇಗವಾಗಿ ನಡೆಯಲಿದೆ.ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ಜಿ ಪ್ಲಸ್ ಟು ಮಾದರಿಯ ಈ ಮನೆಗಳಲ್ಲಿ ನೆಲಮಹಡಿಯಲ್ಲಿ ೮ ಮನೆಗಳಿದ್ದು, ಸೈನಿಕರ ಕೋಟಾದಲ್ಲಿ ೧, ಹಿರಿಯ ನಾಗರೀಕರಿಗೆ ೩, ಅಂಗವಿಕಲರಿಗೆ ೪ ಈ ರೀತಿ ಹಂಚಿಕೆಯಾಗಿದೆ. ೧ನೇ ಮತ್ತು ೨ನೇ ಮಹಡಿಯಲ್ಲಿ ಎಲ್ಲಾ ವರ್ಗದವರಿಗೂ ಹಂಚಿಕೆಯಾಗುತ್ತದೆ. ಎಲ್ಲಾ ಲಾಟರಿ ಪ್ರಕ್ರಿಯೆನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ ಮತ್ತು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. ಮೊದಲು ೨೮೮ ಮನೆಗಳಿಗೆ ಹಂಚಿಕೆ ಪತ್ರ ನೀಡಲಾಗುವುದು ಎಂದರು.
ಸಾಮಾನ್ಯ ವರ್ಗಕ್ಕೆ ೪.೨೭ ಲಕ್ಷ, ಎಸ್‌ಸಿ ಮತ್ತು ಎಸ್‌ಟಿ ಗಳಿಗೆ ೩.೯೭ಲಕ್ಷ ಸಾಲ ಸೌಲಭ್ಯ ಮಂಜೂರಾಗಿದ್ದು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಅಂತಿಮ ಹಂಚಿಕೆ ಪತ್ರ ನೀಡಲಾಗುತ್ತದೆ


ನೆಹರೂ ರಸ್ತೆಯಲ್ಲಿರುವ ಆಶ್ರಯ ಕಚೇರಿಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸೌಜನ್ಯ ಎಂಬ ಕೌಂಟರ್‌ನ್ನು ಕೂಡ ತೆರೆದಿದ್ದು, ಅಲ್ಲಿ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ. ಮೂಲಭೂತ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಒದಗಿಸಲಾಗಿದೆ. ಸಂಪರ್ಕ ರಸ್ತೆಗಳಿಗೂ ಸರ್ಕಾರದ ಅನುದಾನ ಬಂದಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.


ಕಾರ್ಯಕ್ರಮದಲ್ಲಿ ಲಾಟರಿ ಪ್ರಕ್ರಿಯೆ ಮೂಲಕ ವಸತಿಯನ್ನು ಹಂಚಿಕೆ ಮಾಡಲಾಯಿತು. ವೇದಿಕೆಯಲ್ಲಿ ಶಾಸಕ ಆಯನೂರು ಮಂಜುನಾಥ್, ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಆಶ್ರಯ ಸಮಿತಿ ಅಧ್ಯಕ್ಷ ಹೆಚ್. ಶಶಿಧರ್, ಪಾಲಿಕೆ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ, ಧೀರರಾಜ್ ಹೊನ್ನವಿಲೆ, ವಿಪಕ್ಷ ನಾಯಕಿ ರೇಖಾ ರಂಗನಾಥ್, ಈ.ವಿಶ್ವಾಸ್, ಯೋಜನಾಧಿಕಾರಿ ಕರಿ ಭೀಮಣ್ಣನವರ್, ಆಶ್ರಯ ಸಮಿತಿ ಸದಸ್ಯರು, ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!