: ಜಾತ್ರೆ ಹಿನ್ನೆಲೆಯಲ್ಲಿ ಅಗತ್ಯ ಇರುವ ರಸ್ತೆ ಕಾಮಗಾರಿಗಳನ್ನು ತಕ್ಷಣ ಕೈಗೆತ್ತಿಕೊಂಡು ನಿಗಧಿತ ಸಮಯದಲ್ಲಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.

ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿನ ರಸ್ತೆಯನ್ನು ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ತುರ್ತು ಅಭಿವೃದ್ದಿಪಡಿಸುವ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಬಿಇಓ ಕಚೇರಿ ಎದುರು ಮತ್ತು ತಾಲ್ಲೂಕು ಕಚೇರಿ ಪಕ್ಕದ ರಸ್ತೆ ಮಾಡಲು ಹಿಂದೆಯೆ ಯೋಜನೆ ರೂಪಿಸಲಾಗಿತ್ತು. ಆದರೆ ಬೇರೆಬೇರೆ ಕಾರಣದಿಂದ ರಸ್ತೆ ನಿರ್ಮಾಣವಾಗಿರಲಿಲ್ಲ. ಇದೀಗ ಜಾತ್ರೆ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಹೆಚ್ಚಿನ ಜನರು ಸಂಚರಿಸುವ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಮುಂದೆ ಇದನ್ನು ಶಾಶ್ವತ ರಸ್ತೆಯಾಗಿ ರೂಪಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ ಎಂದರು.

ಬಡವರು, ಮಧ್ಯಮ ವರ್ಗದವರು ಸಂತೋಷದಿಂದ ಜಾತ್ರೆಯನ್ನು ನಡೆಸಲು ಅನುಕೂಲವಾಗುವಂತೆ ದರ ನಿಗಧಿಗೊಳಿಸಲಾಗಿದೆ. ಹೆಚ್ಚಿನ ದರ ವಿಧಿಸಿ ಶೋಷಣೆ ಮಾಡದಂತೆ ಸೂಕ್ತ ನಿಗಾವಹಿಸಲು ಜಾತ್ರಾ ಸಮಿತಿಯವರಿಗೆ ಸೂಚನೆ ನೀಡಲಾಗಿದೆ. ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಬೇಕಾದ ಸಿದ್ದತೆಗಳನ್ನು ಸರ್ಕಾರ, ತಾಲ್ಲೂಕು ಆಡಳಿತ ಮತ್ತು ನಗರಸಭೆ ಮಾಡಿಕೊಂಡಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಗಣೇಶಪ್ರಸಾದ್, ಮೈತ್ರಿ ಪಾಟೀಲ್, ಭಾವನಾ ಸಂತೋಷ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಸಂತೋಷ್ ಶೇಟ್, ಶಿವಾನಂದ್, ದೇವೇಂದ್ರಪ್ಪ, ಸತೀಶ್ ಕೆ., ವಿನಾಯಕ ರಾವ್ ಇನ್ನಿತರರು ಹಾಜರಿದ್ದರು.