ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಂದಿರುವ ಮಹಾನಗರ ಪಾಲಿಕೆ ವತಿಯಿಂದ ನಿರ್ಮಾಣಗೊಂಡ ಉಚಿತ ಶೌಚಾಲಯ ಈಗ ವಿವಾದದ ಕೇಂದ್ರ ಬಿಂದುವಾಗಿದ್ದು, ಪ್ರತಿಯೊಬ್ಬರ ಬಳಿ ೧೦ ರೂ. ವಸೂಲಿ ಮಾಡುತ್ತಿದ್ದು, ಮೆಗ್ಗಾನ್ ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಈ ಬಗ್ಗೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಮೇಯರ್ ಶಿವಕುಮಾರ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಾಲಿಕೆಯಿಂದ ನಿರ್ಮಾಣಗೊಂಡ ಈ ಸಾರ್ವಜನಿಕ ಶೌಚಾಲಯದ ಗುತ್ತಿಗೆ ಅವಧಿ ಮುಗಿದಿದ್ದು, ಸಂಪೂರ್ಣ ಉಚಿತವಾದ ಈ ಶೌಚಾಲಯಕ್ಕೆ ೧೦ ರಿಂದ ೧೫ ರೂ. ಸಂಗ್ರಹಿಸುತ್ತಿರುವುದನ್ನು ಸಾರ್ವಜನಿಕರು ಆಕ್ಷೇಪಿಸಿದ್ದರು. ಇಂದು ಮೇಯರ್ ಸ್ಥಳಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಸಾರ್ವಜನಿಕರು ಕೂಡ ೧೦ರೂ. ಕೊಡುತ್ತಿರುವುದು ನಿಜ ಎಂದು ತಿಳಿಸಿದರು.
ಸ್ಥಳದಲ್ಲಿ ಶುಲ್ಕ ವಸೂಲಿ ಮಾಡುತ್ತಿದ್ದವರನ್ನು ಕೇಳಿದಾಗ ಇಲ್ಲ ನಾವು ೭ ರೂ. ಮಾತ್ರ ವಸೂಲಿ ಮಾಡುತ್ತೇವೆ ಎಂದರು. ವಿಪರ್ಯಾಸವೆಂದರೆ ಪಾಲಿಕೆಯಿಂದ ಉಚಿತವಾಗಿ ಪಿನಾಯಿಲ್ ಸೇರಿದಂತೆ ನಿರ್ವಾಹಕರಿಗೆ ಸಂಬಳ ಕೂಡ ನೀಡಲಾಗುತ್ತಿದೆ. ಮತ್ತೆ ಏಕೆ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದ್ದೀರಿ ಎಂದು ಮೇಯರ್ ಕೇಳಿದಾಗ ಬಂದ ಉತ್ತರ ಗಾಬರಿ ತರಿಸುವಂತಿತ್ತು. ಈ ಶೌಚಾಲಯದ ಬಗ್ಗೆ ನಿರ್ವಹಣೆ ಜವಾಬ್ದಾರಿ ಹೊತ್ತ ಪಾಲಿಕೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಶುಲ್ಕ ಸಂಗ್ರಹಿಸಿದವನು ಲತಾ ಮೇಡಮ್ ಎಂಬ ಅಂಗಡಿ ಮಾಲೀಕರಿಗೆ ಕೊಡುತ್ತಾರೆ. ಲತಾ ಮೇಡಮ್ ಬಳಿ ಇನ್ಯಾರೋ ಒಬ್ಬರು ಬಂದು ತೆಗೆದುಕೊಂಡು ಹೋಗುತ್ತಾರಂತೆ. ಪಾಲಿಕೆಗೆ ಇದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯಿಲ್ಲ.
ಹಿಂದೆ ಬಾಬು ಎನ್ನುವವರು ನಿರ್ವಹಿಸುತ್ತಿದ್ದರಂತೆ. ಟೆಂಡರ್ ಮುಗಿದ ಮೇಲೆ ಅವರು ಯಾರ ಬಳಿಯೂ ಹಣ ಪಡೆಯಬೇಡಿ ಎಂದು ಹೇಳಿದ್ದಾರಂತೆ. ಆದರೂ ಹಣ ಸಂಗ್ರಹ ಕಾರ್ಯ ನಿಂತಿಲ್ಲ. ಸ್ವಚ್ಚತೆ ಎಂಬುದು ಇಲ್ಲಿ ಮರಿಚಿಕೆಯಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಬರುವವರು ಅತ್ಯಂತ ಬಡವರು. ಅವರಿಂದಲೆ ಈ ರೀತಿಯ ಹಣ ಸಂಗ್ರಹ ಯಾವ ನ್ಯಾಯ ಎಂಬುದು ಸಾರ್ವಜನಿಕರ ಪ್ರಶ್ನೆ. ಒಟ್ಟಿನಲ್ಲಿ ಶೌಚಾಲಯದ ನಿರ್ವಹಣೆಯ ಸಮಸ್ಯೆ ಇನ್ನಾದರೂ ಬಗೆಹರಿಯಲಿ ಎಂಬುದು ಸಾರ್ವಜನಿಕರ ಒತ್ತಾಸೆ.
ಈ ಸಂದರ್ಭದಲ್ಲಿ ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಸೂಡಾ ಅಧ್ಯಕ್ಷರಾದ ನಾಗರಾಜ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುನಾಥ್, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆರತಿ. ಅ.ಮ.ಪ್ರಕಾಶ್, ಪಾಲಿಕೆ ಸದಸ್ಯರಾದ ಪ್ರಭು, ಆರೋಗ್ಯಾಧಿಕಾರಿ ಅಮೋಘ್ ಮತ್ತಿತರರಿದ್ದರು